Friday, March 1, 2013

ವಿದ್ಯುತ್ ದರ ನಿಯಂತ್ರಣ ಆಯೋಗದ ವಿಚಾರಣೆ

ಮಂಗಳೂರು, ಮಾರ್ಚ್.01: ಇದೇ ಮಾರ್ಚ್ ಉತ್ತರಾರ್ಧದಲ್ಲಿ ವಿದ್ಯುತ್ ದರ ಪರಿಷ್ಕರಣೆಯ ಮುನ್ಸೂಚನೆಯನ್ನು ಕರ್ನಾಟಕ ವಿದ್ಯುಚ್ಛಕ್ತಿ ದರ ನಿಯಂತ್ರಣ ಆಯೋಗ ನೀಡಿದೆ. ಪೂರ್ವಭಾವಿಯಾಗಿ ಆಯೋಗವು ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ವಿಚಾರಣೆಯನ್ನು ನಡೆಸಿತು.
ಗ್ರಾಹಕರ ಪರವಾಗಿ ಹಲವು ಸಂಘಟಣೆಗಳು ವಿದ್ಯುತ್ ದರ ಏರಿಕೆಯ ಪ್ರಸ್ತಾಪವನ್ನು ಸಕಾರಣಗಳೊಂದಿಗೆ ತೀವ್ರವಾಗಿ ವಿರೋಧಿಸಿದವು. ಇದೇ ಸಂದರ್ಭದಲ್ಲಿ  ಪ್ರತಿಯೊಂದು ಯುನಿಟ್ ಗೆ 70 ಪೈಸೆ ದರ ಹೆಚ್ಚಳ ಮಾಡುವಂತೆ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ(ಮೆಸ್ಕಾಂ) ಆಡಳಿತ ನಿರ್ದೇಶಕ ಎಸ್.ಸುಮಂತ್ ಆಯೋಗವನ್ನು ವಿನಂತಿಸಿದರು.
ವಿಚಾರಣೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆಯೋಗದ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಬೆಂಗಳೂರು, ಮೈಸೂರು ಮತ್ತು ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿಗಳ ಸಾರ್ವಜನಿಕ ವಿಚಾರಣೆ ಪೂರ್ಣಗೊಂಡಿದೆ. ಬೆಳಗಾಂ ಮತ್ತು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿಗಳ ಸಾರ್ವಜನಿಕ ವಿಚಾರಣೆ ಶೀಘ್ರದಲ್ಲಿ ನಡೆಯಲಿದೆ ಎಂದರು. ಆಯೋಗದ ಸದಸ್ಯರಾದ ವಿ.ಜಿ.ಹಿರೇಮಠ್ ಮತ್ತು ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.
ಸಾರ್ವಜನಿಕ ವಿಚಾರಣೆ ಮುಗಿಸಿದ ಬಳಿಕ ಮಾರ್ಚ್ ಉತ್ತರಾರ್ಧದಲ್ಲಿ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದ ಶ್ರೀನಿವಾಸ ಮೂತರ್ಿ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ವ್ಯಾಪ್ತಿಯ ಗ್ರಾಹಕರು ಪ್ರಜ್ಞಾವಂತರು. ಇಲ್ಲಿ ಗ್ರಾಹಕರ ದೂರುಗಳು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಮೆಸ್ಕಾಂ  ವಿದ್ಯುತ್ ಪೂರೈಕೆ ಮತ್ತು ವಿತರಣೆಯಲ್ಲಿ ಕ್ಷಮತೆ ಸಾಧಿಸಿರುವುದನ್ನು ಇದು ಪ್ರತಿಫಲಿಸುತ್ತದೆ ಎಂದರು.
ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 2,155 ಆಕ್ಷೇಪಗಳನ್ನು ಗ್ರಾಹಕರು ಸಲ್ಲಿಸಿದ್ದಾರೆ ಎಂದು ಹೇಳಿದ ಅಧ್ಯಕ್ಷರು ಕಂಪೆನಿಗಳು ಆಯೋಗದ ಅನುಮೋದನೆ ಪಡೆದು ಕೊಂಡೇ ವಿದ್ಯುತ್ ಖರೀದಿಸುತ್ತವೆ. ವಿದ್ಯುತ್ ಖರೀದಿಯ ಹಂಚಿಕೆಯನ್ನು ಸರಕಾರ ನಿರ್ಧರಿಸುತ್ತಿದೆ. ಅದನ್ನು ಕೂಡಾ ಆಯೋಗ ನಿರ್ವಹಿಸ ಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಿಚಾರಣೆಯಲ್ಲಿ ವ್ಯಕ್ತವಾಗಿದೆ ಎಂದು ವಿವರಿಸಿದರು.
ಬೇಡಿಕೆಯಲ್ಲಿ ಹೆಚ್ಚಳ:ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ವ್ಯಾಪ್ತಿ ಹೊಂದಿರುವ ಮೆಸ್ಕಾಂಗೆ ವರ್ಷಂಪ್ರತಿ ಬೇಡಿಕೆ ಹೆಚ್ಚುತ್ತಿದೆ. ಗ್ರಾಹಕರ ಬೇಡಿಕೆಯನ್ನು ಈಡೇರಿಸಲು ಹೆಚ್ಚಿನ ಬೆಲೆಯಲ್ಲಿ ವಿದ್ಯುತ್ ಖರೀದಿ ಅನಿವಾರ್ಯವಾಗಿದೆ.ಧಾರಾಕಾರ ಮಳೆ ಮತ್ತು ದಟ್ಟ ಅರಣ್ಯ ಪ್ರದೇಶವಿರುವುದರಿಂದ ಸೌಲಭ್ಯ ನಿಮರ್ಾಣ ಮತ್ತು ನಿರ್ವಹಣೆ ಕಠಿಣ. ವೆಚ್ಚವೂ ಅಧಿಕ.ಉಳಿದ ಎಸ್ಕಾಂಗಳಿಗೆ ಹೋಲಿಸಿದರೆ ಸಿಡಿಲಿನ ತೊದರೆಯೂ ಈ ಭಾಗದಲ್ಲಿ ಹೆಚ್ಚು ಎಂದು ಸುಮಂತ್ ಕಂಪೆನಿಯ ಕಷ್ಟವನ್ನು ಆಯೋಗದ ಎದುರು ತೆರೆದಿಟ್ಟರು. 
ಎಲ್ಲಕ್ಕಿಂತ ಪ್ರಮುಖವಾಗಿ ಶುಲ್ಕ ಪಾವತಿಯಲ್ಲಿ ಮೆಸ್ಕಾಂ ವ್ಯಾಪ್ತಿಯ ಗ್ರಾಹಕರು ಮುಂಚೂಣಿಯಲ್ಲಿದ್ದಾರೆ. ಅವರು ಅಪೇಕ್ಷಿಸುವ ಗುಣಮಟ್ಟದ ಸೌಲಭ್ಯಗಳನ್ನು ಕಂಪೆನಿ ಒದಗಿಸಲೇ ಬೇಕಾಗುತ್ತದೆ. ಉತ್ತಮ ಸೌಲಭ್ಯ ಮತ್ತು ಗುಣಮಟ್ಟದ ಸೇವೆ ವಿಸ್ತರಣೆಗೆ ಬಂಡವಾಳ ಹೂಡಿಕೆ ಅನಿವಾರ್ಯ. ವರ್ಷದಿಂದ ವರ್ಷಕ್ಕೆ ಈ ವೆಚ್ಚದಲ್ಲಿ ಭಾರೀ ಏರಿಕೆಯಾಗುತ್ತಲೇ ಇದೆ ಎಂದು ಸುಮಂತ್ ದರ ಏರಿಕೆಯ ಪ್ರಸ್ತಾಪವನ್ನು ಆಯೋಗದ ಮುಂದೆ ಸಮರ್ಥಿಸಿ ಕೊಂಡರು.
ಕ್ಷಮತೆ ಹೆಚ್ಚಳಕ್ಕಾಗಿ ಮೆಸ್ಕಾಂ ನಿರಂತರ ಪ್ರಯತ್ನಿಸುತ್ತಿದೆ. 10 ವರ್ಷದ ಹಿಂದೆ 10 ಸಾವಿರದಷ್ಟಿದ್ದ ಟ್ರಾನ್ಸ್ಫಾರ್ಮರ್ಗಳ ಸಂಖ್ಯೆಯನ್ನು 40,557ಕ್ಕೆ ಹೆಚ್ಚಿಸಲಾಗಿದೆ. ವಿತರಣಾ ಸಮಯದ ನಷ್ಟವನ್ನು ಶೇ.14ರಂದ ಶೇ.11ಕ್ಕೆ ಇಳಿಸಲಾಗಿದೆ. 2007-08ರಲ್ಲಿ ಶೇ.10.84ರಷ್ಟಿದ್ದ ಡಿಟಿಸಿ ವೈಪಲ್ಯವನ್ನು ಈ ಆರ್ಥಿಕ ಸಾಲಿನಲ್ಲಿ ಶೇ.7.95ಕ್ಕೆ ತಂದು ನಿಲ್ಲಿಸಲಾಗಿದೆ. ಸರಕಾರದ ಆದ್ಯತೆಗಳಾದ ಕುಡಿಯುವ ನೀರು ಮತ್ತು ರಾಜೀವ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆ ಕಂಪೆನಿ ಆದ್ಯತೆಯಲ್ಲಿ ವಿದ್ಯುತ್ ಸಂಪರ್ಕ ನೀಡುತ್ತಿದೆ ಎಂದು ಸುಮಂತ್ ವಿವರಿಸಿದರು.
ಮೆಸ್ಕಾಂನಲ್ಲಿ ಶೇ.41ರಷ್ಟು ಹುದ್ದೆಗಳು ಖಾಲಿ ಇವೆ. ಅದಾಗ್ಯೂ ಉತ್ತಮ ಸೇವೆ ನೀಡಲು ಕಂಪೆನಿ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಹುದ್ದೆಗಳನ್ನು ತುಂಬಿದರೆ ಮತ್ತೆ ಮಾಸಿಕ ರೂ.12 ಕೋಟಿಗಳ ಹೊರೆಯನ್ನು ಕಂಪೆನಿ ಹೊರ ಬೇಕಾಗುತ್ತದೆ. ಜತೆಗೆ ಸರಕಾರದ ಸಹಾಯಧನ ಪಾವತಿ ಕಾಲಕಾಲಕ್ಕೆ ತಲುಪದೆ ವಿಳಂಬವಾಗುತ್ತಿದೆ  ಎಂದು ಮೆಸ್ಕಾಂ ಎಂ.ಡಿ ಹೇಳಿದರು.
ದರ ಹೆಚ್ಚಳ ಬೇಡ:ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಲಾಭದಲ್ಲಿದೆ. ಹಾಗಾಗಿ ದರ ಹೆಚ್ಚಳ ಮಾಡ ಬೇಕೆಂಬ ಕಂಪೆನಿಯ ವಾದ ಸಮಂಜಸವಾದುದಲ್ಲ ಎಂದು ಕೆನರಾ ಬೇಂಬರ್ ಆಫ್ ಕಾಮರ್ಸ್ ನ ಪರವಾಗಿ ಎಸ್.ಎಸ್.ಕಾಮತ್, ಭಾರತೀಯ ಕಿಸಾನ್ ಸಂಘದ ಪರವಾಗಿ ಸತ್ಯನಾರಾಯಣ ಉಡುಪ ಮತ್ತು ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಆಯೋಗದ ಮುಂದೆ ಪ್ರತಿಪಾದಿಸಿದರು.
ಮುಂದಿನ ವರ್ಷ ಮೆಸ್ಕಾಂ ರೂ.200 ಕೋಟಿಯಷ್ಟು ಲಾಭ ಗಳಿಸಲಿದೆ. ನಷ್ಟ, ನಷ್ಟ ಎಂಬ ಗುಂಗಿನಿಂದ ಕಂಪೆನಿ ಹೊರಗೆ ಬರ ಬೇಕು. ಬಾಕಿ ಇರುವುದನ್ನು ವಸೂಲಿ ಮಾಡಲಿ, ನಿಜವಾದ ಲೆಕ್ಕ ಕೊಡಲಿ. ಗ್ರಾಹಕರಂತೆ ಕಂಪೆನಿಯೂ ಸಾಲವನ್ನು ಸಕಾಲಕ್ಕೆ ಪಾವತಿಸಿ ಬಡ್ಡಿ ಕಟ್ಟುವುದನ್ನು ತಪ್ಪಿಸಲಿ. ಕೃಷಿಕರ  ಎಲ್ಲಾ ಪಂಪುಸೆಟ್ಗಳಿಗೆ ಮಾಪಕ ಅಳವಡಿಸಲಿ. ಅನಗತ್ಯವಾಗಿರುವ ಕೆಲವು ಖರ್ಚುಗಳನ್ನು ಕಡಿಮೆ ಮಾಡಲಿ ಎಂದು ಸತ್ಯನಾರಾಯಣ ಉಡುಪ ಸಲಹೆ ನೀಡಿದರು.
ಭಾಗ್ಯಜ್ಯೋತಿ, ಕುಟೀರ ಜ್ಯೋತಿಗಳಿಗೂ ಮಾಪಕ ಅಳವಡಿಸಲು ಆಗ್ರಹಿಸಿದ ಅವರು ಎಲ್ಲಾ ಕಂಪೆನಿಗಳು ಒಂದೇ ಪ್ರಮಾಣದಲ್ಲಿ ದರ ಏರಿಸುವಂತೆ ಆಯೋಗಕ್ಕೆ ಸಲ್ಲಿಸಿರುವ ಕೋರಿಕೆಗೆ ತೀವ್ರ ಆಕ್ಷೇಪ ಎತ್ತಿದರು. ಒಂದು ಲಾಭದಲ್ಲಿರುವ ಕಂಪೆನಿ ಮತ್ತೆಲ್ಲವೂ ವಿವಿಧ ಮಟ್ಟದಲ್ಲಿ ನಷ್ಟ ಅನುಭವಿಸುತ್ತಿರುವ ಕಂಪೆನಿಗಳು!ಹಾಗಿರುವಾಗ ಎಲ್ಲಾ ಕಂಪೆನಿಗಳು ಒಂದೇ ದರ ಕೇಳಿರುವ ಹಿಂದೆ ಇರುವ ಉದ್ದೇಶವಾದರೂ ಏನು ಎಂದು ಉಡುಪ ಪ್ರಶ್ನಿಸಿದರು.
ಇದೇ ಪ್ರಶ್ನೆಯನ್ನು ಮ್ಯಾಮ್ಕೋಸ್ ಅಧ್ಯಕ್ಷ ನರಸಿಂಹ ನಾಯಕ್ ಹಲವರು ಕೇಳಿದರು. 750 ಮಂದಿ ಮಾರ್ಗದಾಳುಗಳನ್ನು ಮಾಸಿಕ ರೂ.8,500ರಂತೆ ಗುತ್ತಿಗೆ ಆಧಾರದಲ್ಲಿ ನೇಮಿಸಕೊಂಡಿದ್ದರೂ ಅವರಿಗೆ ಮಾಸಿಕ ರೂ.5,000ದಷ್ಟು ಮಾತ್ರ ಪಾವತಿಯಾಗುತ್ತಿದೆ. ಉಳಿದ ಮೊತ್ತ ಯಾರ್ಯಾರ ಮಧ್ಯೆ ಹಂಚಿಕೆಯಾಗುತ್ತದೆ ಎಂಬುದು ತಿಳಿಯ ಬೇಕು ಎಂದ ಉಡುಪ ಅವರು ಕಂಪೆನಿ ನೇರ ನೇಮಕಾತಿ ಮಾಡಿಕೊಂಡ ಅವ್ಯಹಾರವನ್ನು ತಪ್ಪಿಸ ಬೇಕೆಂದರು.
ರೈತರನ್ನು ಋಣದಲ್ಲಿ ಹಾಕಬೇಡಿ. ಪ್ರತೀ ಬಿಲ್ಲಿನಲ್ಲಿ ಹಳೆ ಬಾಕಿ ಎಂದು ನಮೂದು ಇರುತ್ತದೆ. ಅದಕ್ಕೊಂದು ಕೊಣೆಗಾಣಿಸಿ ಎಂದು ರೈತ ಪ್ರತಿನಿಧಿಗಳು ಆಯೋಗದ ಮುಂದೆ ಬಿನ್ನವಿಸಿಕೊಂಡರು. ದರ ಹೆಚ್ಚಳ ನಷ್ಟ ತುಂಬಲು ಇರುವ ಏಕೈಕ ಮಾರ್ಗ ಅಲ್ಲ. ಬದಲಾಗಿ ಕಂಪೆನಿ ದಕ್ಷತೆ ಹೆಚ್ಚಿಸಿಕೊಳ್ಳ ಬೇಕು. ರೈತರು ವಿದ್ಯುತ್ ಅಪವ್ಯಯ ಮಾಡುವುದನ್ನು ತಪ್ಪಿಸಲು ಸಾವಿರ ಯುನಿಟ್ಗಳಿಗಿಂತ ಹೆಚ್ಚು ಬಳಕೆಯಾಗುವ ಪ್ರಕರಣಗಳನ್ನು ಅಧ್ಯಯನಕ್ಕೊಳ ಪಡಿಸ ಬೇಕು ಎಂದು ಭಾರತೀಯ ಕಿಸಾನ್ ಸಂಘದ ರಾಮಕೃಷ್ಣ ಶರ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಮೆಸ್ಕಾಂನಲ್ಲಿ ಇಂಜಿನಿಯರ್ ಗಳು ಸಿಗುತ್ತಾರೆ. ಆದರೆ ಮಾರ್ಗದಾಳುಗಳು ಸಿಗ್ತಾ ಇಲ್ಲ, ಎಂದ ನರಸಿಂಹ ನಾಯಕ್ ಶಿವಮೊಗ್ಗ ನಗರ ಹೊರತು ಪಡಿಸಿ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಇಲ್ಲ. ಮೊದಲು ಗುಣಮಟ್ಟದ ವಿದ್ಯುತ್ ಕೊಡಿ. ಆಮೇಲೆ ದರ ಹೆಚ್ಚಿಸಿ ಎಂದರು. ಅನಧಿಕೃತ ಸಂಪರ್ಕಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿದ ನಾಯಕ್ ಅಪಾರ ಪ್ರಮಾಣದಲ್ಲಿ ಬಾಕಿ ಇರುವ ವಿದ್ಯುತ್ ಬಿಲ್ ವಸೂಲಿ ಮಾಡುವಂತೆಯೂ ಸಲಹೆ ನೀಡಿದರು.
ಮಂಜುಗಡ್ಡೆ ಉದ್ಯಮವನ್ನು ಸೀಝನಲ್ ಕೈಗಾರಿಕೆ ಎಂದು ಪರಿಗಣಿಸಿ ಕಡಿಮೆ ದರದಲ್ಲಿ ವಿದ್ಯುತ್ ನೀಡ ಬೇಕು ಎಂದು ಉದ್ದಿಮೆಯ ಪ್ರತಿನಿಧಿಗಳು ಆಗ್ರಹಿಸಿದರು. ಚಿಕ್ಕಮಗಳೂರಿನ ಕಾಫಿ ಬೆಳೆಗಾರರನ್ನು ಕೂಡಾ ಅದೇ ಗುಂಪಿಗೆ ಸೇರಿಸಿ ಮಾನ್ಯ ಮಾಡುವಂತೆ ಅನಿಲ್ಕುಮಾರ್ ಆಗ್ರಹಿಸಿದರು. ಸೇವಾ ಉದ್ದಿಮೆಗಳನ್ನು ಎಲ್ಟಿ-5 ವಲಯಕ್ಕೆ ಸೇರಿಸಿ ಬೆಂಬಲಿಸುವಂತೆ ಕೆನರಾ ಚೇಂಬರ್ ಪರವಾಗಿ ಬ.ಎ.ನಝೀರ್ ಒತ್ತಾಯಿಸಿದರು.