ಮಂಗಳೂರು,ಮಾರ್ಚ್.12:-ಭಾರತ ಸರ್ಕಾರದ ನೆಹರು ಯುವ ಕೇಂದ್ರದ ವತಿಯಿಂದ ಉಳ್ಳಾಲದಲ್ಲಿ ಮಾರ್ಚ್ 16 ರಿಂದ 22 ರ ವರೆಗೆ 6 ದಿನಗಳ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಏರ್ಪಡಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಪೂರ್ವಭಾವೀ ಸಭೆಯಲ್ಲಿ ನಿರ್ಣಯಿಸಲಾಯಿತು. ಈ ಶಿಬಿರವು ಯುವಕರಲ್ಲಿ ಜಾಗೃತಿ ಉಂಟುಮಾಡಿ ಅವರಲ್ಲಿ ದೇಶಾಭಿಮಾನ ಮೇಳೈಸುವಂತೆ ಶಿಬಿರವನ್ನು ಆಯೋಜಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಎನ್.ಪ್ರಕಾಶ್ ಅವರು ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ 15 ರಿಂದ 25 ವರ್ಷದೊಳಗಿನ ಯುವ ಸಮೂಹ ಎಚ್ಐವಿ/ಏಡ್ಸ್ ಸೋಂಕಿಗೆ ಗುರಿಯಾಗುತ್ತಿರುವ ಬಗ್ಗೆ ಜಿಲ್ಲಾ ಎಚ್ಐವಿ/ಏಡ್ಸ್ ನಿಯಂತ್ರಣಾಧಿಕಾರಿ ಡಾ.ಕಿಶೋರ್ ಕುಮಾರ್ ಅವರು ಸಭೆಯ ಗಮನಕ್ಕೆ ತಂದು ಯುವಕರಲ್ಲಿ ಎಚ್ಐವಿ/ಏಡ್ಸ್ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು. ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಶಾಲಾ/ಕಾಲೇಜುಗಳಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸುವಂತೆ ಹಾಗೂ ಯುವಕ/ಯುವತಿ ಸಂಘ ಸಂಸ್ಥೆಗಳಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಮಾಹಿತಿ ಶಿಬಿರ ಏರ್ಪಡಿಸಿ ಅರಿವು ಮೂಡಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ವೈಯಕ್ತಿಕ ಶುಚಿತ್ವದ ಬಗ್ಗೆ ಹದಿಹರೆಯದವರಿಗೆ ತಿಳುವಳಿಕೆ ಮೂಡಿಸಲು ಸಹ ಜಿಲ್ಲಾಧಿಕಾರಿಗಳು ಸೂಚಿಸಿದರು.ಸಭೆಯಲ್ಲಿ ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ಸಿ.ಜೆ.ಎಫ್.ಸಿ ಸೋಜಾ ,ಯುವಕ/ಯುವತಿ ಮಂಡಲಗಳ ಪದಾಧಿಕಾರಿಗಳು ಹಾಜರಿದ್ದರು.