Monday, March 4, 2013

ಚುನಾವಣಾ ಕರ್ತವ್ಯ ನಿರ್ಲಕ್ಷ್ಯ : 13 ಉಪನ್ಯಾಸಕರಿಗೆ ಕಾರಣ ಕೇಳಿ ನೋಟೀಸು

ಮಂಗಳೂರು,ಮಾರ್ಚ್.04 :-ನಗರ ಸ್ಥಳೀಯ  ಸಂಸ್ಥೆಗಳ ಚುನಾವಣೆ 2013- ಸಂಬಂಧ ಚುನಾವಣಾ ಕರ್ತವ್ಯಕ್ಕೆ  ಮತಗಟ್ಟೆ ಅಧಿಕಾರಿಗಳಾಗಿ ನೇಮಿಸಲ್ಪಟ್ಟಿದ್ದ 13 ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಚುನಾವಣಾ ತರಬೇತಿಗೆ ಗೈರು ಹಾಜರಾಗುವ ಮೂಲಕ ಚುನಾವಣಾ ಕರ್ತವ್ಯವನ್ನು ನಿರ್ಲಕ್ಷ್ಯ ಮಾಡಿದ ಕಾರಣ ಅವರಿಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ  ಎನ್. ಪ್ರಕಾಶ್ ರವರು ಕಾರಣ ಕೇಳಿ ನೋಟೀಸನ್ನು (ಶೋಕಾಸ್ ನೋಟೀಸ್) ಜಾರಿಗೊಳಿಸಿರುತ್ತಾರೆ.
     
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಾರ್ಯದರ್ಶಿಗಳಿಗೆ ಶೋಕಾಸ್ ನೋಟೀಸ್:
ನಗರ ಸ್ಥಳೀಯ  ಸಂಸ್ಥೆಗಳ ಚುನಾವಣೆ 2013- ಸಂಬಂಧ ಚುನಾವಣಾ ಜಾಹೀರಾತುಗಳನ್ನು ನೀಡುವ ಬಗ್ಗೆ ಮಾಧ್ಯಮ ಸಮಿತಿ ಅನುಮತಿ ಇಲ್ಲದೆ ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಾರ್ಯದರ್ಶಿಗಳಿಗೆ ಮಾಧ್ಯಮ ಸಮಿತಿ ಸಂಚಾಲಕರು ಶೋಕಾಸ್ ನೋಟೀಸು ಜಾರಿಗೊಳಿಸಿ, 24 ಗಂಟೆಗಳೊಳಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.
ಮತದಾನದ 48 ಗಂಟೆಗಳ ಮುಂಚೆ ಬಹಿರಂಗ ಪ್ರಚಾರ ಅಂತ್ಯ :
ನಗರ ಸ್ಥಳೀಯ  ಸಂಸ್ಥೆಗಳ ಚುನಾವಣೆ 2013- ಸಂಬಂಧ
ಬಹಿರಂಗ ಪ್ರಚಾರ ಕಾರ್ಯವನ್ನು ಚುನಾವಣೆ ದಿನಾಂಕದ 48 ಗಂಟೆಗಳ ಮುಂಚಿತವಾಗಿ ಸ್ಥಗಿತಗೊಳಿಸಲು  ಎಲ್ಲಾ ರಾಜಕೀಯ ಪಕ್ಷಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಎನ್.ಪ್ರಕಾಶ್ ರವರು ಸೂಚಿಸಿದ್ದಾರೆ.ದಿನಾಂಕ 5-3-13 ರ ಬೆಳಿಗ್ಗೆ 7 ಗಂಟೆಯಿಂದ ಮೊಬೈಲ್ ನಲ್ಲಿ ಎಸ್ಎಂಎಸ್ ಕಳುಹಿಸುವುದು ವಿವಿಧ ವಾಹಿನಿಗಳ(ರೇಡಿಯೋ/ಎಫ್ಎಂ/ಜಾಲತಾಣ) ಮುಖಾಂತರ ಜಾಹೀರಾತು ನೀಡುವುದು ನಿಷೇಧಿಸಲಾಗಿದ್ದು ಇದನ್ನು ಎಲ್ಲಾ ರಾಜಕೀಯ ಪಕ್ಷಗಳು  ತಪ್ಪದೇ ಅನುಸರಿಸಬೇಕೆಂದು  ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಗೃಹ ರಕ್ಷಕರುಗಳು ಹಾಜರಾಗಲು ಸೂಚನೆ :
ಮಂಗಳೂರು ಮಹಾನಗರಪಾಲಿಕೆ ಮತ್ತು ಸ್ಥಳೀಯ ನಗರಸಭೆ,ಪುರಸಭೆಗಳಿಗೆ ದಿನಾಂಕ 7-3-13 ರಂದು  ನಡೆಯಲಿರುವ ಚುನಾವಣೆ ಸಂಬಂಧ ದಕ್ಷಿಣಕನ್ನಡ ಜಿಲ್ಲೆಯ ಗೃಹರಕ್ಷಕರನ್ನು  ದಿನಾಂಕ 5-3-13 ರಿಂದ 7-3-13 ರ ವರೆಗೆ ವಿವಿಧ ತಾಲೂಕು ಕೇಂದ್ರಗಳಲ್ಲಿ ಮತ್ತು ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿಯೋಜಿಸಲಾಗುವುದು. ಆದ್ದರಿಂದ ಹಾಲಿ ಇರುವ ಗೃಹರಕ್ಷಕ ದಳದ ಸದಸ್ಯರುಗಳು ತಾಲೂಕು ಮಟ್ಟದಲ್ಲಿ ಸಂಬಂಧಪಟ್ಟ ಘಟಕಾಧಿಕಾರಿಗಳನ್ನು ಮತ್ತು ಮಂಗಳೂರು ನಗರದ ಗೃಹರಕ್ಷಕರುಗಳು ಡಿ.ಎ.ಆರ್. ಮೈದಾನದಲ್ಲಿ ದಿನಾಂಕ 5-3-13 ರಂದು ಬೆಳಿಗ್ಗೆ 8 ಗಂಟೆಗೆ ವರದಿ ಮಾಡಿಕೊಳ್ಳಲು ಗೃಹರಕ್ಷಕ ದಳದ ಸಮಾದೇಷ್ಟರು ತಿಳಿಸಿರುತ್ತಾರೆ.