Friday, March 1, 2013

ಚುನಾವಣಾ ನೀತಿ ಸಂಹಿತೆ ಪಾಲಿಸಿ: ಜಿಲ್ಲಾಧಿಕಾರಿ

ಮಂಗಳೂರು, ಮಾರ್ಚ್.01:- ಸ್ಥಳೀಯಾಡಳಿತ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯನ್ನು ಶಾಂತಿಯುತವಾಗಿ, ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ನಿಯಮಾವಳಿಗಳನ್ನು ರೂಪಿಸಿದ್ದು, ನಿಯಮಗಳ ಅನುಷ್ಠಾನಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಹೇಳಿದ್ದಾರೆ.
ಜಿಲ್ಲಾ ಧಿಕಾರಿ ಕೋರ್ಟ್  ಸಭಾಂ ಗಣ ದಲ್ಲಿಂದು ಸುದ್ದಿ ಗೋಷ್ಠಿ ಯಲ್ಲಿ ಮಾತ ನಾಡಿದ ಅವರು, ಚುನಾ ವಣಾ ಪ್ರಚಾರ ಕ್ಕಾಗಿ ಅನುಮತಿ ಪಡೆದ ಧ್ವನಿ ವರ್ಧ ಕಗ ಳನ್ನು ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆ ಯವ ರೆಗೆ ಮಾತ್ರ ಉಪ ಯೋಗಿಸ ಬಹು ದಾಗಿದೆ ಎಂದರು.
ಚುನಾ ವಣಾ ಪ್ರಚಾರ ಕ್ಕಾಗಿ ಉಪ ಯೋ ಗಿಸುವ ವಾಹನಗಳ ನೋಂದಣಿ ಸಂಖ್ಯೆಯನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗೆ ನೀಡಿ ಅವರಿಂದ ಅನುಮತಿ ಪತ್ರ ಪಡೆದು ಅದನ್ನು ಉಪಯೋಗಿಸುತ್ತಿರುವ ವಾಹನದಲ್ಲಿ ಅಂಟಿಸಿ ಚುನಾವಣಾ ಪ್ರಚಾರ ಮಾಡಲು ಅವಕಾಶವಿದೆ. ಚುನಾವಣಾ ಪ್ರಚಾರ ಮಾರ್ಚ್ 6ರ ಬೆಳಗ್ಗೆ 7 ಗಂಟೆಗೆ ನಿಲ್ಲಿಸಬೇಕು. ಮತದಾನದಂದು ಮತಗಟ್ಟೆಯಿಂದ 100 ಮೀಟರ್ ಅಂತರದ ಪ್ರದೇಶದೊಳಗೆ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ. ಅಂದು ಮತಗಟ್ಟೆಯಂದ 100 ಮೀಟರ್ ದೂರದಲ್ಲಿ ಅಭ್ಯರ್ಥಿಗಳ ಸರಳ ಶಿಬಿರವನ್ನು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆದು ನಿರ್ಮಿಸುವಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಶಿಬಿರದಲ್ಲಿ ಯಾವುದೇ ಭಿತ್ತಿ ಪತ್ರ, ಬಾವುಟ, ಚಿಹ್ನೆ ಅಥವಾ ಪ್ರಚಾರ ಸಾಧನಗಳು ಇರಕೂಡದು. ಶಿಬಿರದಲ್ಲಿ ಮತದಾರರಿಗೆ ತಿಂಡಿ ತಿನಿಸು ಹಂಚಲು ಹಾಗೂ ಗುಂಪುಕೂಡಲು ಅವಕಾಶ ಇರುವುದಿಲ್ಲ. ಚುನಾವಣೆಯಂದು ಓರ್ವ ಅಭ್ಯರ್ಥಿ ಗರಿಷ್ಠ 5 ವಾಹನಗಳನ್ನು ಚುನಾವಣಾಧಿಕಾರಿಯಿಂದ ಅನುಮತಿ ಪಡೆದು ಅಭ್ಯರ್ಥಿ ಅಥವಾ ಇತರ ಏಜೆಂಟರು ಉಪಯೋಗಿಸಬಹುದಾಗಿದೆ. ಆದರೆ ಮತದಾರರನ್ನು ಮತಗಟ್ಟೆಗೆ ವಾಹನದಲ್ಲಿ ಕರೆತರುವುದನ್ನು ನಿಷೇಧಿಸಲಾಗಿದೆ. ಇಂತಹ ಪ್ರಕರಣ ಕಂಡು ಬಂದಲ್ಲಿ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಜರುಗಿಸಲಾಗುವುದು.
ಚುನಾವಣೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಗಳಿಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ತಲಾ 3 ಲಕ್ಷ ರೂ.ಗಳನ್ನು ವೆಚ್ಚ ಮಾಡಬಹುದಾಗಿದೆ. ಪುರಸಭೆ ಮತ್ತು ಪಟ್ಟಣ ಪಂಚಾಯತ್ ಚುನಾವಣಾ ವಾರ್ಡ್ ಗಳಿಗೆ ಕ್ರಮವಾಗಿ 1.50 ಲಕ್ಷ ರೂ. ಹಾಗೂ 1 ಲಕ್ಷ ರೂ. ವೆಚ್ಚ ಮಾಡಬಹುದಾಗಿದೆ. ಈ ವೆಚ್ಚಗಳ ವಿವರವನ್ನು ಪ್ರತಿದಿನ ನಿಗದಿ ಪಡಿಸಿದ ನಮೂನೆ 1ರಿಂದ 4ರಲ್ಲಿ ರಿಜಿಸ್ಟರ್ನಲ್ಲಿ ಅಭ್ಯರ್ಥಿಗಳು ದಾಖಲಿಸಬೇಕಾಗುತ್ತದೆ. ಇದನ್ನು ಚುನಾವಣಾ ವೀಕ್ಷಕರು, ಚುನಾವಣಾ ಅಧಿಕಾರಿ ಅಥವಾ ಸಹಾಯಕ ಚುನಾವಣಾ ಅಧಿಕಾರಿ  ಮತ್ತು ಚುನಾವಣಾ ಖರ್ಚು ವೆಚ್ಚಗಳನ್ನು ಪರಿಶೀಲಿಸಲು ನೇಮಕ ಮಾಡಲಾದ ಅಧಿಕಾರಿಯ ಪರಿಶೀಲನೆಗೆ ಹಾಜರು ಪಡಿಸಲು ತಿಳಿಸಿದಾಗ ನೀಡತಕ್ಕದ್ದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೂ ಆಗಿರುವ ಪ್ರಕಾಶ್ ಅವರು ಸ್ಪಷ್ಟಪಡಿಸಿದರು.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ತಡೆಯಲು ಮತ್ತು ಶಾಂತಿಯುತ ಮತದಾನಕ್ಕಾಗಿ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ 32, ಮೂಡಬಿದ್ರೆ ಪುರಸಭೆಗೆ 2, ಉಳ್ಳಾಲಕ್ಕೆ 3, ಬಂಟ್ವಾಳಕ್ಕೆ 3, ಪುತ್ತೂರಿಗೆ 4, ಬೆಳ್ತಂಗಡಿ ಪಟ್ಟಣ ಪಂಚಾಯಿತಿಗೆ 1, ಸುಳ್ಯ ಪಟ್ಟಣ ಪಂಚಾಯಿತಿಗೆ 2 ಸೆಕ್ಟರ್ ಅಧಿಕಾರಿಗಳಿರುವರು.
ಚುನಾವಣಾ ವೀಕ್ಷಕರು ಈಗಾಗಲೇ ಜಿಲ್ಲೆಯಲ್ಲಿ ಕಾರ್ಯೋನ್ಮುಖರಾಗಿದ್ದು, ನೀತಿಸಂಹಿತೆ ಉಲ್ಲಂಘನೆ ದೂರು ಸಲ್ಲಿಸಲು ಪಾಲಿಕೆ ವ್ಯಾಪ್ತಿಯಲ್ಲಿ 9448128199, ಮೂಡಬಿದ್ರೆ, ಉಳ್ಳಾಲ, ಬಂಟ್ವಾಳ ವ್ಯಾಪ್ತಿಗೆ 9480878000, ಪುತ್ತೂರು, ಬೆಳ್ತಂಗಡಿ, ಸುಳ್ಯಕ್ಕೆ 9036278507 ಈ ದೂರವಾಣಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ, ಮನಪಾ ಆಯುಕ್ತ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.