ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿ ಹಾಗೂ ಸಿಬ್ಬಂದಿ ನೇಮಕ ಹಾಗೂ ಕಾರ್ಯವ್ಯಾಪ್ತಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯ ಆಡಳಿತ ವ್ಯಾಪ್ತಿಗೆ ರಾಜ್ಯದ ಎಲ್ಲ 30 ಜಿಲ್ಲೆಗಳ ಘಟಕಗಳು ಸೇರ್ಪಡೆಗೊಳ್ಳುತ್ತವೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಘಟಕದ ಅಧ್ಯಕ್ಷರಾಗಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉಪಾಧ್ಯಕ್ಷರಾಗಿರುತ್ತಾರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯಾಧಿಕಾರಿಗಳು, ಸಮಾಜ ಕಲ್ಯಾಣಾಧಿಕಾರಿಗಳು ಸದಸ್ಯರಾಗಿರುತ್ತಾರೆ. ಒಬ್ಬರು ಮಕ್ಕಳ ಕ್ಷೇತ್ರದಲ್ಲಿ ಅನುಭವವಿರುವ ಸ್ವಯಂ ಸೇವಾ ಸಂಸ್ಥೆಯ ನಾಮ ನಿರ್ದೇಶಿತ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕ ಇವರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
ಬಾಲನ್ಯಾಯ ಕಾರ್ಯಕ್ರಮ, ಬೀದಿ ಮಕ್ಕಳ ಕಾರ್ಯಕ್ರಮ, ಸ್ವದೇಶಿ ದತ್ತು ಕಾರ್ಯಕ್ರಮ ಪ್ರೋತ್ಸಾಹಿಸಲು ಶಿಶುಗೃಹ/ ವಿಶೇಷ ದತ್ತ ಏಜೆನ್ಸಿಗಳಿಗೆ ನೆರವಿನ ಯೋಜನೆ, ಚೈಲ್ಡ್ ಲೈನ್ (ಮಕ್ಕಳ ಸಹಾಯವಾಣಿ) ಇವನ್ನೆಲ್ಲಾ ವಿಲೇನಗೊಳಿಸಿ ಮಕ್ಕಳಿಗೆ ಗರಿಷ್ಠ ಸೌಲಭ್ಯ ಲಭ್ಯವಾಗಿಸಲು ಯೋಜನಾ ಅನುಷ್ಠಾನ ಮತ್ತು ಉಸ್ತುವಾರಿ ಮಾಡಲು ಪ್ರತ್ಯೇಕ ವಿಭಾಗಗಳನ್ನು ರಚಿಸಲು ಮಾರ್ಗಸೂಚಿ ರೂಪಿಸಲಾಗಿದೆ.
ಈ ಘಟಕದ ಕಾರ್ಯಕ್ರಮಗಳು ಅಭಿಯಾನ ಮಾದರಿಯಲ್ಲಿ ಜರುಗಬೇಕಿದ್ದು, ಪ್ರತೀ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯನ್ನು ಸಿದ್ಧಪಡಿಸಬೇಕಿದೆ. ಮಕ್ಕಳ ಬಗ್ಗೆ ಅಂಕಿ ಅಂಶಗಳ ದಾಖಲೆ ನಿರ್ವಹಿಸಬೇಕಿದೆ. ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳನ್ನು ನೋಂದಣಿ ಮಾಡಿಕೊಳ್ಳುವ ಬಗ್ಗೆ ಖಚಿತಪಡಿಸಿಕೊಳ್ಳವುದು ಹಾಗೂ ಬಾಲನ್ಯಾಯ ಕಾಯಿದೆಯಡಿ ಸಂಸ್ಥೆಗಳಲ್ಲಿ ಮಕ್ಕಳಿಗೆ ಒದಗಿಸಬೇಕಾಗಿರುವ ಕನಿಷ್ಠ ಸೇವೆಗಳನ್ನು ನಿಗದಿಪಡಿಸಿದ್ದು, ಆಗಿಂದಾಗ್ಗೆ ಈ ಸಂಸ್ಥೆಗಳು ಒದಗಿಸುತ್ತಿರುವ ಸೇವೆಗಳ ಗುಣಮಟ್ಟದ ಪರಿಶೀಲನೆ ನಡೆಸಬೇಕಿದೆ.
ಸಮಗ್ರ ಮಕ್ಕಳ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ರೂಪಿಸಲಾಗಿರುವ ಈ ಘಟಕ ಸಕ್ರಿಯ ಹಾಗೂ ಪರಿಣಾಮಕಾರಿ ಕಾರ್ಯಾನುಷ್ಠಾನಕ್ಕೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಮಾರ್ಗದರ್ಶನ ನೀಡಿದರು. ಸಿಬ್ಬಂದಿ ನೇಮಕ ಹಾಗೂ ಘಟಕ ಕಾರ್ಯಾಚರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕರಿಂದ ಮಾಹಿತಿ ಪಡೆದರು.
ಇಲಾಖೆಯನ್ನು ಸಬಲೀಕರಿಸುವ ಜೊತೆಗೆ ಈ ಘಟಕ ಪರಿಣಾಮಕಾರಿಯಾಗಿ ಕಾರ್ಯೋನ್ಮುಖವಾಗಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆಗಳನ್ನು ನೀಡಿದರು.