ಮಂಗಳೂರು,ಮಾರ್ಚ್.17:ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ/ಜಿಲ್ಲಾ ಘಟಕಗಳ ಅಧ್ಯಕ್ಷರ/ಗಡಿನಾಡ ಘಟಕಗಳ ಅಧ್ಯಕ್ಷರ ಚುನಾವಣೆಯು ಎಪ್ರಿಲ್ 29 ರಂದು ನಡೆಸುವ ಬಗ್ಗೆ ಚುನಾವಣಾ ವೇಳಾ ಪಟ್ಟಿ ಈಗಾಗಲೇ ಪ್ರಕಟವಾಗಿದ್ದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು 1932 ಮತದಾರರು ನೊಂದಾಯಿಸಿದ್ದಾರೆಯೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣಾಧಿಕಾರಿ ಹಾಗೂ ಮಂಗಳೂರು ತಹಶೀಲ್ದಾರರಾದ ರವಿಚಂದ್ರ ನಾಯಕ್ ಅವರು ತಿಳಿಸಿದ್ದಾರೆ. ಅವರು ಇಂದು ತಮ್ಮ ಕಚೇರಿಯಲ್ಲಿ ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದರು.ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಆದರೆ ಯಾರಿಂದಲೂ ಆಕ್ಷೇಪಣೆಗಳು ಬಂದಿಲ್ಲ ಎಂದ ಅವರು ಚುನಾವಣೆಗೆ ಉಮೇದುವಾರಿಕೆಗಳನ್ನು ಸಲ್ಲಿಸಲು 21-3-12 ರಿಂದ 28-3-12 ರ ವರೆಗೆ ಪ್ರತೀದಿನ ಬೆಳಿಗ್ಗೆ 11 ರಿಂದ ಸಂಜೆ 5 ರ ವರೆಗೆ ಅವಕಾಶ ಕಲ್ಪಿಸಲಾಗಿದೆಯೆಂದು ಅವರು ತಿಳಿಸಿದರು.
ನಾಮಪತ್ರಗಳ ಪರಿಶೀಲನೆಯನ್ನು 31-3-12 ರಂದು ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ಕಚೇರಿ ಮಂಗಳೂರಿನಲ್ಲಿ ಅಭ್ಯರ್ಥಿ ಅಥವಾ ಅವರು ಸೂಚಿಸುವ ಸೂಚಕರ ಸಮಕ್ಷಮ ನಡೆಸಲಾಗುವುದು.. 5-4-12 ರಂದು ಅಪರಾಹ್ನ 3 ಗಂಟೆಯೊಳಗೆ ನಾಮಪತ್ರಗಳನ್ನು ಹಿಂಪಡೆಯಬಹುದಾಗಿದೆ. ಚುನಾವಣೆ ಆವಶ್ಯವಿದ್ದಲ್ಲಿ ಎಪ್ರಿಲ್ 29 ರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಎಲ್ಲಾ ತಾಲೂಕು ಕಚೇರಿ ಆವರಣದ ಮತಗಟ್ಟೆಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ.ಅಂದೇ ಚುನಾವಣಾ ಮತಗಳ ಎಣಿಕೆ ಕಾರ್ಯ ನಡೆಯಲಿದೆಯೆಂದು ಅವರು ತಿಳಿಸಿರುತ್ತಾರೆ.
ಚುನಾವಣೆಗೆ ಹಿಂದಿನಂತೆ ಈ ಬಾರಿಯೂ ಮೂಲ್ಕಿಯಲ್ಲಿ ಹೆಚ್ಚುವರಿ ಮತದಾನ ಕೇಂದ್ರ ಸ್ಥಾಪಿಸಲು ಅನುಮತಿಗಾಗಿ ಪತ್ರ ಬರೆಯಲಾಗಿದ್ದು ,ಅನುಮತಿ ದೊರೆತಲ್ಲಿ ಹೆಚ್ಚುವರಿ ಮತದಾನ ಕೇಂದ್ರವನ್ನು ತೆರೆಯಲಾಗುವುದೆಂದರು.