Friday, March 30, 2012

'ಸಕಾಲ'-ಏ.02ರಿಂದ ರಾಜ್ಯದಾದ್ಯಂತ ಜಾರಿ

ಬೆಂಗಳೂರು,ಮಾರ್ಚ್.30:ರಾಜ್ಯ ಸರ್ಕಾರವು ಜಾರಿಗೆ ತಂದಿರುವ 'ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯಿದೆ 2011' ಏಪ್ರಿಲ್ 02 ರಿಂದ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಜಾರಿಗೆ ಬರಲಿದೆ.ನಾಗರಿಕರಿಗೆ ವಿವಿಧ ರೀತಿಯ ಸೇವೆಗಳನ್ನು ಪೂರೈಸುವ 11 ಇಲಾಖೆಗಳನ್ನು ಅಂದರೆ ಕಂದಾಯ, ಶಿಕ್ಷಣ, ಆರ್ಥಿಕ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ಥಳೀಯ ಸಂಸ್ಥೆಗಳು, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಒಟ್ಟು 151 ಸೇವೆಗಳನ್ನು ಈ ಕಾಯ್ದೆಯ ವ್ಯಾಪ್ತಿಯಲ್ಲಿ ತರಲಾಗಿದೆ.
ಆಯಾ ಇಲಾಖೆಗಳು ತಾವು ಪೂರೈಸುವ ಸೇವೆ ಕುರಿತು ಸೇವೆಗಾಗಿ ಅಗತ್ಯವಿರುವ ಸಮಯದ ಕುರಿತು, ಮೇಲ್ಮನವಿ ಪ್ರಾಧಿಕಾರದ ಕುರಿತು ಮತ್ತು ವಿಳಂಬವಾದಲ್ಲಿ ಪರಿಹಾರ ಶುಲ್ಕ ನೀಡುವ ಕುರಿತು ತಮ್ಮ ಕಚೇರಿಗಳಲ್ಲಿ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕಿದೆ. ನಾಗರಿಕರಿಗೆ ಸೇವೆಯನ್ನು ಪೂರೈಸುವುದರಲ್ಲಿ ವಿಳಂಬವಾದರೆ ವಿಳಂಬಿತ ಅವಧಿಯಲ್ಲಿ ಪ್ರತಿದಿನಕ್ಕೆ 20-00 ರೂ.ನಂತೆ ಗರಿಷ್ಠ 500-00 ರೂ.ಗಳ ಮಿತಿಯವರೆಗೆ ಸಂಬಂಧಿತ ಸರ್ಕಾರಿ ನೌಕರರು ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಪರಿಹಾರ ಶುಲ್ಕ ನೀಡಬೇಕಿದೆ.
ವಿವಿಧ ಇಲಾಖೆಗಳಲ್ಲಿ ಸೇವೆಯನ್ನು ಪಡೆಯಲು ಬಯಸುವ ನಾಗರಿಕರು ಸಂಬಂಧಿತ ದಾಖಲೆಗಳು ಮತ್ತು ನಿಗದಿಪಡಿಸಿದ ಶುಲ್ಕದೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಕೂಡಲೆ ಅವರಿಗೊಂದು ರಸೀದಿ ನೀಡಲಾಗುತ್ತದೆ. ಈ ರಸೀದಿಯಲ್ಲಿ 15 ಅಂಕಿಗಳ ಗುರುತಿನ ಸಂಖ್ಯೆಯೊಂದನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ ಕೂಡಲೆ ನಾಗರಿಕರು ರಸೀದಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆ ನೀಡಿದಲ್ಲಿ ಅವರಿಗೆ ಎಸ್ಎಂಎಸ್ ಮೂಲಕ ಅರ್ಜಿಯ ಪ್ರಗತಿಯ ಕುರಿತು ವರದಿ ದೊರಕುತ್ತದೆ. ಮೊಬೈಲ್ ಇಲ್ಲದಿದ್ದಲ್ಲಿ ಅರ್ಜಿದಾರರು ಅಂತರ್ ಜಾಲದಲ್ಲಿ ತಮ್ಮ ಅರ್ಜಿಯ ಪ್ರಗತಿಯನ್ನು ಪರಿಶೀಲಿಸಬಹುದಾಗಿದೆ. ಈ ಪ್ರಗತಿ ಪರಿಶೀಲನೆ ಮತ್ತಿತರ ಎಲ್ಲ ಪ್ರಕ್ರಿಯೆಗಳಿಗೂ ಗ್ರಾಹಕರಿಗೆ ಸ್ವೀಕೃತಿಯಲ್ಲಿ ನೀಡಿದ 15 ಅಂಕಿಯ ಗುರುತಿನ ಸಂಖ್ಯೆಯನ್ನೇ ಬಳಸಬೇಕಾಗಿರುತ್ತದೆ. ಸಕಾಲ ದ ಕಾಲ್ ಸೆಂಟರ್ ಗೆ ಕರೆಮಾಡಿದಾಗ ಕೂಡ ಈ ಗುರಿತಿನ ಸಂಖ್ಯೆ ಆಧಾರದಿಂದ ಗ್ರಾಹಕರು ತಮ್ಮ ಅರ್ಜಿಯ ಸ್ಥಿತಿ ಅರಿಯಬಹುದಾಗಿದೆ.
ನಾಗರಿಕ ಸೇವಾ ಖಾತರಿ ಕಾಯ್ದೆ ಸಕಾಲ ಕುರಿತು ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಅರ್ಜಿಯನ್ನು ತುಂಬಲಾಗದ ಗ್ರಾಹಕರಿಗಾಗಿ ಕಾಲ್ಸೆಂಟರ್ ನಲ್ಲಿರುವ ಸಿಬ್ಬಂದಿ ಅರ್ಜಿ ತುಂಬಲು ಮತ್ತು ತಮ್ಮ ಅರ್ಜಿಯ ಸ್ಥಿತಿಗತಿಗಳನ್ನು ಅರಿಯಲು ನೆರವು ನೀಡುತ್ತಾರೆ. ಸಾರ್ವಜನಿಕರು ದೂರವಾಣಿ ಸಂಖ್ಯೆ 080-44554455 ಗೆ ಕರೆಮಾಡಿ ಕೂಡ ಗ್ರಾಹಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈ ಕಾಯ್ದೆಯ ವೆಬ್ ವಿಳಾಸ www.sakala.kar.nic.in ಮತ್ತು ಇ-ಮೇಲ್ ವಿಳಾಸ sakala@kar.in ಆಗಿದ್ದು, ಅಂತರ್ ಜಾಲದ ಮುಖಾಂತರವೂ ಸಾರ್ವಜನಿಕರು ಈ ಕಾಯ್ದೆಯ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಏಪ್ರಿಲ್-02, 2012 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳು, ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಈ ಕಾಯ್ದೆಯ ಅನುಷ್ಠಾನಕ್ಕೆ ಚಾಲನೆ ನೀಡುವರು.
ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ಮತ್ತು ಸರ್ಕಾರಿ ನೌಕರರಲ್ಲಿ ಹೊಸ ವೃತ್ತಿ ಸಂಸ್ಕೃತಿಯನ್ನು ಮೂಡಿಸುವ ಆಶಯ ಹೊಂದಿರುವ ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಸೇವೆ ಪೂರೈಸುವ ಮತ್ತು ಅವರ ಅಮೂಲ್ಯ ಸಮಯ ಮತ್ತು ಹಣವನ್ನು ಉಳಿಸುವ ಉದ್ದೇಶ ಹೊಂದಿರುವ ಈ ಕಾಯ್ದೆಯ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ವಿನಂತಿಸಲಾಗಿದೆ.
ಇಲ್ಲಿಯವರೆಗೆ ಈ ಕಾಯ್ದೆಯ ಅಡಿ ಎಲ್ಲಾ ಇಲಾಖೆಗಳಲ್ಲಿಯೂ ಒಟ್ಟಾಗಿ 1,32,304 ಅರ್ಜಿಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 1,12,439 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.