ಮಂಗಳೂರು,ಸೆಪ್ಟೆಂಬರ್.18: ಕಾಲಮಿತಿಯೊಳಗೆ ನಿರ್ಮಾಣ ಕಾಮಗಾರಿ ಮತ್ತು ಗುಣಮಟ್ಟ ಕಾಯ್ದುಕೊಳ್ಳುವಿಕೆ ಸಿವಿಲ್ ಇಂಜಿನಿಯರ್ಗಳ ಹೊಣೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್ ಅವರು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯತ್ ನಲ್ಲಿ ಇಂಜಿನಿಯರಿಂಗ್ ದಿನಾಚರಣೆ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ ಎಂ ವಿಶ್ವೇಶ್ವರಯ್ಯನವರಷ್ಟು ದಕ್ಷವಾಗಿ ಕರ್ತವ್ಯ ನಿರ್ವಹಿಸಿ ಎಂದು ನಾನು ಒತ್ತಾಯಿಸುವುದಿಲ್ಲ. ಆದರೆ ಉತ್ತಮ ನಿರ್ಮಾಣಗಳಿಂದ ಜಿಲ್ಲೆಯ ಪ್ರತಿಷ್ಠೆ ಹೆಚ್ಚಲಿದೆ. ಕಾರ್ಯಾಗಾರಗಳು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಪೂರಕವಾಗಲಿ ಎಂದರು. ಕನ್ನಂಬಾಡಿ ಅಣೆಕಟ್ಟು ಇಂದೂ ನಮ್ಮ ಹೆಮ್ಮೆ. ಈ ನಿರ್ಮಾಣಗಳು ನಮ್ಮ ಜಿಲ್ಲಾ ಪಂಚಾಯತ್ ಇಂಜಿನಿಯರ್ ಗಳಿಗೆ ಮಾದರಿಯಾಗಬೇಕು ಎಂದರು.
ಅತಿಥಿಗಳಾಗಿದ್ದ ಎನ್ ಐ ಟಿ ಕೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಮತ್ತು ಪ್ರೊಫೆಸರ್ ಡಾ ಎ ಯು ರವಿಶಂಕರ್ ಅವರು, ನಮ್ಮ ಸರ್ವಋತು ರಸ್ತೆಗಳು ಹೈವೇಗಳ ಬದಲು ಲೋ ವೇ ಗಳಾಗಿವೆ. ಗ್ರಾಮೀಣ ರಸ್ತೆಗಳಂತೂ ಇನ್ನೂ ದುಸ್ಥಿತಿಯಲ್ಲಿದೆ. ರಸ್ತೆಗಳ ಯೋಜನೆ ರೂಪಿಸುವಾಗ ದಕ್ಷಿಣ ಕನ್ನಡ ಜಿಲ್ಲೆಯ ಮಳೆಯನ್ನು ಗಮನದಲ್ಲಿಟ್ಟು ನಿರ್ಮಿಸಿದರೆ ನಮ್ಮಲ್ಲೂ ಉತ್ತಮ ನಿರ್ಮಾಣಗಳು ಸಾಧ್ಯ ಎಂದರು. ಉತ್ತಮ ನಗರ ನಿರ್ಮಾಣ ಅವಕಾಶಗಳು ಇಲ್ಲಿ ಮುಕ್ತವಾಗಿದ್ದು, ಉತ್ತಮ ನಿರ್ಮಾಣಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳಿವೆ. ಅತ್ಯುತ್ತಮ ಸಂಪರ್ಕ ವ್ಯವಸ್ಥೆಯಿಂದ ಮಂಗಳೂರನ್ನು ಉತ್ತಮ ನಗರವಾಗಿ ರೂಪಿಸಲು ಸಾಧ್ಯ ಎಂದರು.
ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ನ ಉಪಾಧ್ಯಕ್ಷ (ದಕ್ಷಿಣ) ಅಶೋಕ್ ಕುಮಾರ್ ಅವರು ಮಾತನಾಡಿದರು. ಕಾರ್ಯಾಗಾರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಮಾತನಾಡಿ, ಸರ್ ಎಂ ವಿಶ್ವೇಶ್ವರಯ್ಯನವರ ಬದ್ಧತೆ ಮತ್ತು ಇಂದಿನ ವಿನೂತನ ತಂತ್ರಜ್ಞಾನಗಳನ್ನು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಅಳವಡಿಸಿಕೊಳ್ಳುವುದರಿಂದ ಅದ್ಭುತ ನಿರ್ಮಾಣಗಳನ್ನು ಸಾಧ್ಯವಾಗಿಸಬಹುದು ಎಂದರು.
ವಿಶ್ವೇಶ್ವರಯ್ಯನವರ ಆಡಳಿತ ಜಾಣ್ಮೆ, ಪಾರದರ್ಶಕ ಕಾರ್ಯವೈಖರಿ ಎಲ್ಲರಿಗೂ ಮಾರ್ಗದರ್ಶನ ನೀಡುವಂತಹುದು. ಕೈಗಾರಿಕಾ ಇಂಜಿನಿಯರಿಂಗ್, ವ್ಯಾವಹಾರಿಕ ಇಂಜಿನಿಯರಿಂಗ್ ಜೊತೆ ಇಂದು ಮಾನವೀಯ ಇಂಜಿನಿಯರಿಂಗ್ ಬಗ್ಗೆಯೂ ನಾವಿಂದು ಮಾತನಾಡುತ್ತೇವೆ. ಸಾಧ್ಯತೆಗಳು ವಿಫುಲವಾಗಿರುವ ಇಂದಿನ ಕಾಲಘಟ್ಟದಲ್ಲಿ ಎಲ್ಲ ಇಂಜಿನಿಯರಿಂಗ್ ವಿಭಾಗಗಳು ಸಮರ್ಥವಾಗಿ, ಕಾಮಗಾರಿಗಳನ್ನು ಸಕಾಲದಲ್ಲಿ ಮುಗಿಸುವುದರಿಂದ ಅಂದಾಜುಪಟ್ಟಿ 20 ಕೋಟಿಗಳಿಂದ 300 ಕೋಟಿಗಳಿಗೆ ತಲುಪುವ ಸಾಧ್ಯತೆಗಳನ್ನು ತಪ್ಪಿಸಬಹುದಾಗಿದೆ ಎಂದರು.
ಜಿಲ್ಲಾ ಪಂಚಾಯತ್ ನಲ್ಲಿ ಪ್ರಥಮ ಬಾರಿಗೆ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮತ್ತು ಮೆಡ್ರಾಸ್ ಸಿಮೆಂಟ್ಸ್ ಲಿಮಿಟೆಡ್ ಸಹಕಾರದಿಂದ ಇಂದಿನ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಅಧ್ಯಕ್ಷ ವಿಜಯ್ ವಿಷ್ಣು ಮಯ್ಯ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸತ್ಯಾನಾರಾಯಣ್ ವಂದಿಸಿದರು. ನಿರ್ಮಿತಿಯ ರಾಜೇಂದ್ರ ಕಲ್ಬಾವಿ ಕಾರ್ಯಕ್ರಮ ನಿರೂಪಿಸಿದರು. ಇಂಜಿನಿಯರ್ ಲಕ್ಷ್ಮೀಶ್ ಯೆಡಿಯಾಳ್ ಮತ್ತು ಡಾ ಎಚ್ ಸಿ ಚನ್ನಗಿರಿ ಗೌಡ ಉಪಸ್ಥಿತರಿದ್ದರು.