ಮಂಗಳೂರು, ಸೆಪ್ಟೆಂಬರ್.01: ಮೂರು ವರ್ಷಗಳ ಹಿಂದೆ ರಾಜ್ಯದಲ್ಲಿ 2000ದಷ್ಟಿದ್ದ ಅಕ್ರಮ ಮದ್ಯ ತಯಾರಿಕಾ ಕೇಂದ್ರಗಳು ಪ್ರಸ್ತುತ 93ಕ್ಕೆ ಇಳಿಕೆಯಾಗಿದ್ದು, ಮುಂದಿನ ಎರಡು ತಿಂಗಳೊಳಗೆ ಇವುಗಳನ್ನು ಕೂಡಾ ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಅಬಕಾರಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.
ಮೇರಿಹಿಲ್ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿಂದು ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಅಕ್ರಮ ಮದ್ಯ ಕೇಂದ್ರಗಳನ್ನು ನಿರ್ಮೂಲನೆಗೊಳಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
2011-12ನೆ ಸಾಲಿನಲ್ಲಿ 9200 ಕೋಟಿ ರೂ. ರಾಜಸ್ವ ಸಂಗ್ರಹ ಗುರಿಯ ಬದಲಿಗೆ 9827.89 ಕೋಟಿ ರೂ.ಗಳನ್ನು ಸಂಗ್ರಹಿಸುವ ಮೂಲಕ ಗುರಿ ಮೀರಿದ ಸಾಧನೆ ಮಾಡಲಾಗಿದೆ. ಮಂಗಳೂರು ವಿಭಾಗ ಮಟ್ಟದಲ್ಲಿ ಈ ಅವಧಿಯಲ್ಲಿ 392.16 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ. ಈ ವರ್ಷ ಎಪ್ರಿಲ್ನಿಂದ ಜುಲೈವರೆಗೆ 210.54 ಕೋಟಿ ರೂ. ರಾಜಸ್ವವನ್ನು ವಿಭಾಗ ಮಟ್ಟದಲ್ಲಿ ಸಂಗ್ರಹಿಸಲಾಗಿದೆ. 2012-13ನೆ ಸಾಲಿಗೆ ರಾಜ್ಯವಾರು 11200 ಕೋಟಿ ರೂ.ಗಳ ಗುರಿ ಹೊಂದಲಾಗಿದೆ ಎಂದರು.
2011-12ನೆ ಸಾಲಿನಲ್ಲಿ ರಾಜ್ಯಾದ್ಯಂತ ಒಟ್ಟು 20,854 ದಾಳಿಗಳನ್ನು ನಡೆಸಿ, 3587 ಮೊಕದ್ದಮೆಗಳನ್ನು ದಾಖಲಿಸಿ 2236 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. 113 ವಿವಿಧ ಬಗೆಯ ವಾಹನಗಳನ್ನು ಜಪ್ತಿಪಡಿಸಲಾಗಿದೆ. ಈ ಅವಧಿಯಲ್ಲಿ 77901.02 ಲೀಟರ್ ಮದ್ಯ, 32095.4 ಲೀಟರ್ ಬಿಯರ್/ಪೆನ್ನಿ, 22024 ಲೀಟರ್ ಮದ್ಯಸಾರ, 135.05 ಲೀ. ಸಾರಾಯಿಯನ್ನು ಜಪ್ತಿ ಪಡಿಸಲಾಗಿದೆ. 3394.8 ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು 54699.27 ಲೀಟರ್ ಬೆಲ್ಲದ ಕೊಳೆಯನ್ನು ಜಪ್ತಿಪಡಿಸಿ ನಾಶಗೊಳಿಸಲಾಗಿದೆ ಎಂದು ಸಚಿವ ರೇಣುಕಾಚಾರ್ಯ ತಿಳಿಸಿದರು.
ಅಂತಾರಾಷ್ಟ್ರೀಯ ಕ್ರೀಡಾ ಸಾಧಕನಿಗೆ ಸಚಿವ ರೇಣುಕಾಚಾರ್ಯ ಭರವಸೆ
ಲಿಫ್ಟಿಂಗ್ (ಭಾರ ಎತ್ತುವಿಕೆ), ಬಾಡಿ ಬಿಲ್ಡಿಂಗ್ (ದೇಹದಾಢ್ರ್ಯ) ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ, ಅಬಕಾರಿ ಇಲಾಖೆಯಲ್ಲಿ ಕಳೆದ ಸುಮಾರು 15 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ವಿನ್ಸೆಂಟ್ ಪ್ರಕಾಶ್ ಕಾರ್ಲೋ ಹಾಗೂ ಇನ್ನೋರ್ವ ಉದ್ಯೋಗಿ, ದೇಹದ್ಯಾರ್ಢ ಪಟು ಸತೀಶ್ ಕುಮಾರ್ ಅವರು ಸೆಪ್ಟಂಬರ್ ನಲ್ಲಿ ರಷ್ಯಾದಲ್ಲಿ ನಡೆಯಲಿರುವ ಏಷ್ಯನ್ ಬೆಂಚ್ ಪ್ರೆಸ್ ನಲ್ಲಿ ಭಾಗವಹಿಸುವ ಖರ್ಚು ವೆಚ್ಚವನ್ನು ಇಲಾಖೆ ವತಿಯಿಂದ ಭರಿಸುವುದಾಗಿ ಸಚಿವ ರೇಣುಕಾಚಾರ್ಯ ಭರವಸೆ ನೀಡಿದ್ದಾರೆ.
2011ರ ಡಿಸೆಂಬರ್ 14ರಿಂದ 18ರವರೆಗೆ ಇಂಗ್ಲೆಡಿನ ಲಂಡನ್ ನಲ್ಲಿ ನಡೆದ ಕಾಮನ್ವೆಲ್ತ್ ನ ಭಾರ ಎತ್ತುವಿಕೆ ಸ್ಪರ್ಧೆಯಲ್ಲಿ ದೇಶಕ್ಕೆ ಚಿನ್ನದ ಪದಕದ ಹೆಗ್ಗಳಿಕೆಯನ್ನು ಮಂಗಳೂರಿನವರಾದ ವಿನ್ಸೆಂಟ್ ತಂದುಕೊಟ್ಟಿದ್ದರೂ ಅವರಿಗೆ ಇಲಾಖೆಯ ವತಿಯಿಂದ ಮನ್ನಣೆ ದೊರಕಿಲ್ಲದಿರುವ ಬಗ್ಗೆ ಸುದ್ದಿಗಾರರು ಸಚಿವರ ಗಮನ ಸೆಳೆದಾಗ ಈ ಭರವಸೆ ನೀಡಿರುವ ಸಚಿವರು, ಕಾಮನ್ವೆಲ್ ನಲ್ಲಿ ಚಾಂಪಿಯನ್ ಶಿಪ್ ಪಡೆದು ಪದಕ ಪಡೆದಿರುವುದಕ್ಕೆ ಸೂಕ್ತ ಗೌರವ ಸಲ್ಲಿಸುವ ಭರವಸೆಯನ್ನೂ ಅವರು ಈ ಸಂದರ್ಭ ತಿಳಿಸಿದರು.