ಮಂಗಳೂರು, ಸೆಪ್ಟೆಂಬರ್. 01 :- ಜಿಲ್ಲೆಯಲ್ಲಿರುವ ಕ್ರೀಡಾಂಗಣಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸ್ಥಳೀಯ ಸಂಪನ್ಮೂಲ ಸೃಷ್ಟಿ ಮಾಡಿಕೊಳ್ಳಿ ಎಂದು ಯುವಜನಸೇವಾ ಮತ್ತು ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳಾ ಕ್ರೀಡಾಂಗಣದ ಆವರಣದಲ್ಲೇ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸುವ ಮೂಲಕ ಅಥವಾ ಇನ್ನಿತರೇ ಪ್ರಗತಿಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಕ್ರೀಡಾಂಗಣಗಳ ಉತ್ತಮ ನಿರ್ವಹಣೆ ಸಾಧ್ಯ. ನಿರ್ವಹಣೆಗಿರುವ ಆರ್ಥಿಕ ಸಂಪನ್ಮೂಲದ ಕೊರತೆಯನ್ನು ಈ ಮೂಲಕ ನಿವಾರಿಸಬಹುದು ಎಂದು ಸಚಿವರು ಸಲಹೆ ಮಾಡಿದರು.
ಕ್ರೀಡಾಂಗಣದ, ಜಿಲ್ಲೆಯ ಕ್ರೀಡಾವಸತಿ ನಿರ್ಮಾಣ ಸೇರಿದಂತೆ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳನ್ನು ಪರಿಶೀಲಿಸಿದ ಸಚಿವರು, ಜಿಲ್ಲೆಯ ಕ್ರೀಡಾ ಹಾಸ್ಟೆಲ್ ಬಗ್ಗೆ 5ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆರು ವರ್ಷ ಅಧ್ಯಯನ ಮಾಡಲು ಕ್ರೀಡಾ ಹಾಸ್ಟೆಲ್ ನಿರ್ಮಿಸಲು ಉದೇಶಿಸಿರುವುದಾಗಿ ಹೇಳಿದರು.
ಮಂಗಳಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣದ ಪ್ರಗತಿ ಪರಿಶೀಲಿಸಿದ ಸಚಿವರು, ಗುಣಮಟ್ಟದಲ್ಲಿ ಕುಂದುಂಟಾಗಬಾರದು ಎಂದರು. ತಾಲೂಕು ಕ್ರೀಡಾಂಗಣಗಳ ಪ್ರಗತಿ ಪರಿಶೀಲಿಸಿದ ಅವರು, ಸುಳ್ಯ ತಾಲೂಕಿನ ಕ್ರೀಡಾಂಗಣವನ್ನು ಖುದ್ದಾಗಿ ಪರಿಶೀಲಿಸುವುದಾಗಿ ನುಡಿದರು.
ನಗರದ ವನಿತಾವನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳವನ್ನು ಯುವಜನೋತ್ಸವದಲ್ಲಿ ಉಳಿಸಿದ ಮೂರು ಕೋಟಿರೂ.ಗಳಲ್ಲಿ ನಿರ್ಮಿಸುವ ಉಪಸಭಾಪತಿಗಳಾದ ಎನ್ ಯೋಗೀಶ್ ಭಟ್ ಅವರ ಕೋರಿಕೆಗೆ ಸಕಾರಾತ್ಮಕ ಸ್ಪಂದನೆ ನೀಡಿದರು.
ಕ್ರೀಡಾ ನೀತಿ ರಚಿಸುವ ಕ್ರೀಡಾಳುಗಳಿಗೆ ಹಾಜರಾತಿ ಕಡಿಮೆ ಇದ್ದರೂ ವ್ಯಾಸಂಗದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವ ಹಾಗೂ ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಶೇಕಡ 2ರಷ್ಟು ಮೀಸಲಾತಿಯನ್ನು ಕಲ್ಪಿಸುವುದಾಗಿ ಸಚಿವರು ಭರವಸೆ ನೀಡಿದರು.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಕ್ರೀಡಾ ಶಾಲೆ ಹಾಗೂ ಕ್ರೀಡಾ ತರಬೇತಿದಾರರು ಮತ್ತು ಸ್ಥಳೀಯವಾಗಿ ಕಬ್ಬಡ್ಡಿ ಮತ್ತು ಗರಡಿ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ನುಡಿದರು. ಯುವನೀತಿ ರಚನೆಗೆ ಹಾಗೂ ಯುವಜನಸೇವೆ ಅಭಿವೃದ್ಧಿಗೆ ಗಮನಹರಿಸುವುದಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.