ಮಂಗಳೂರು,ಸೆಪ್ಟೆಂಬರ್.11 : ದಕ್ಷಿಣ ಕನ್ನಡ ಜಿಲ್ಲೆಯ 32 ಗ್ರಾಮಗಳಿಗೆ ಸುವರ್ಣ ಗ್ರಾಮ ಯೋಜನೆಯಡಿ 33.50 ಕೋಟಿ ರೂ. ಬಿಡುಗಡೆಯಾಗಿದ್ದು, ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಎರಡು ಗ್ರಾಮಗಳಾದ ಕೊಂಡೆಮೂಲಕ್ಕೆ 51.52 ಲಕ್ಷ ಮತ್ತು ಬಜಪೆಗೆ 204.07 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಟಿ. ರವಿ ಹೇಳಿದರು.
ಇಂದು ಮೂಡಬಿದ್ರೆಯ ಸಮಾಜಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಜನಪರ ಯೋಜನೆಗಳಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದ್ದು ಎಲ್ಲರೂ ಸಹಕಾರ ಸಮನ್ವಯದಿಂದ ಯೋಜನೆಯ ಫಲ ಎಲ್ಲರಿಗೂ ತಲುಪಿಸುವಂತೆ ಕಾರ್ಯೋನ್ಮುಖವಾಗಬೇಕೆಂದರು.
ಮೂಡಬಿದರೆ ಪುರಸಭೆಗೆ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ನಿಧಿಯಡಿ 5 ಕೋಟಿ ರೂ., ಮುಲ್ಕಿಗೆ ಎರಡು ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಯೋಜನೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತರಬೇಕೆಂದು ಸೂಚಿಸಿದರು.
ಅನುಪಾಲನಾ ವರದಿಯಲ್ಲಿ ಕಾರ್ಯಾನುಷ್ಠಾನದ ಮಾಹಿತಿ ಇರಬೇಕೆಂದ ಸಚಿವರು, ಇಲಾಖೆಗಳು ಜನಪರ ಕೆಲಸಕ್ಕೆ ಸಮನ್ವಯತೆಯಿಂದ ಕೆಲಸ ಮಾಡಬೇಕೆಂದರು. ಕುಡಿಯುವ ನೀರು, ಆರೋಗ್ಯ ಇಲಾಖೆ ಹೆಚ್ಚಿನ ಶ್ರಮವಹಿಸಿ ಶ್ರದ್ಧೆಯಿಂದ ಕೆಲಸ ಮಾಡಬೇಕು; ಪುರಸಭೆ ವಸತಿ ರಹಿತರ ಪಟ್ಟಿ ಮಾಡಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡದಲ್ಲಿ ಸಾಧನೆ ಕಡಿಮೆಯಾಗಿದೆ ಎಂದರು. ಗ್ರಾಮಪಂಚಾಯತ್ ಗಳು ಸಕ್ರಿಯ ಅಭಿವೃದ್ದಿಗೆ ಸ್ಪಂದಿಸಬೇಕು. ಯೋಜನೆಗಳ ಸದ್ಬಳಕೆಯಿಂದ ಅಭಿವೃದ್ಧಿ ಸಾಧ್ಯ ಎಂದರು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಎಲ್ಲರ ಸಂಘಟಿತ ಯತ್ನವಾದರೆ ಮಾತ್ರ ಅನುದಾನ ಸದ್ಬಳಕೆಯಾಗಲಿದೆ ಎಂದರು.
ಶಾಸಕರಾದ ಅಭಯಚಂದ್ರ ಜೈನ್ ಅವರು ಮಾತನಾಡಿ, ಮಳೆಗಾಲ ಮುಗಿದ ಕೂಡಲೇ ಸರ್ಕಾರ ನೀಡಿರುವ ಎಲ್ಲ ಅನುದಾನಗಳ ಸದ್ಬಳಕೆಯಾಗಬೇಕೆಂದರು. ಕುಡಿಯುವ ನೀರು, ಆಶ್ರಯ ಯೋಜನೆಗಳ ನಿಗದಿತ ಗುರಿ ಸಾಧಿಸಬೇಕೆಂದರು. ಸರ್ಕಾರಿ ಶಾಲೆ ವಿಲೀನದ ಚರ್ಚೆಗೆ ಉತ್ತರಿಸಿದ ಸಚಿವರು, ಮಕ್ಕಳಿಗಾಗಿ ಶಾಲೆ ಎಂಬುದನ್ನು ಎಲ್ಲರೂ ಮನಗಾಣಬೇಕೆಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಬರುವ ರಸ್ತೆ ಕಾಮಗಾರಿಗಳ ಅಭಿವೃದ್ಧಿ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು.ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಭತ್ತದ ಕೃಷಿ ಕಾಮಗಾರಿಗಳನ್ನು ಸೇರಿಸುವ ಬಗ್ಗೆ ಸಂಸತ್ ನಲ್ಲಿ ಚರ್ಚೆಯಾಗಿದೆ ಎಂದು ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದರು. ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಶಾಸಕ ಯು ಟಿ ಖಾದರ್ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಮಾತನಾಡಿ, ಅಧಿಕಾರಿಗಳು ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ದಿ ಸಭೆಗಳನ್ನು ಸ್ಥಳೀಯರೊಂದಿಗೆ ಚರ್ಚಿಸಿ ಪರಿಹರಿಸಲು ತಾಲೂಕು ಮಟ್ಟದಲ್ಲಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ. ಅಭಿವೃದ್ದಿ ಅಂಕಿ ಅಂಶಗಳು ಸರಿಯಾಗಿರಬೇಕೆಂದರು. ಇಂದು ಸಚಿವರನ್ನು ಸ್ವಾಗತಿಸಲು ಹೂವಿನ ಬಳಕೆಯ ಬದಲಿಗೆ ಒಂದು ಸಾವಿರ ರೂ.ಗಳನ್ನು ರೆಡ್ ಕ್ರಾಸ್ ಸೊಸೈಟಿಗೆ ನೀಡಲಾಗಿದೆ. ಇದೊಂದು ಉತ್ತಮ ಮಾದರಿ ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ , ತಾಲೂಕು ಪಂಚಾಯತ್ ಅಧ್ಯಕ್ಷೆ ಭವ್ಯ ಗಂಗಾಧರ್ ಉಪಸ್ಥಿತರಿದ್ದರು.
ಸಭೆಗೆ ಹಾಜರಾಗದ ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿ ಕಾರಿ,ಪಶು ಸಂಗೋಪನಾ ಇಲಾ ಖೆಯ ಸಹಾ ಯಕ ನಿರ್ದೇಶಕ ಮತ್ತು ಮೂಡ ಬಿದ್ರೆ ಪಟ್ಟಣ ಯೋಜನಾ ಪ್ರಾಧಿಕಾರದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಚಿವರು ಸೂಚಿಸಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿತಿ ಮೀರಿದ ಪ್ಲಾಸ್ಟಿಕ್ ಹಾವಳಿಯನ್ನು ತಡೆಯಲು ಕ್ರಮ ಕೈಗೊಂಡಿದ್ದು, ನವೆಂಬರ್ ಒಂದರೊಳಗೆ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಅನುಷ್ಟಾನಕ್ಕೆ ತರಲಾಗುವುದು ಎಂದರು. ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡವರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರ ಬಯಸಿದರೆ ಮಾತ್ರ ಸರ್ಕಾರ ಅವರಿಗೆ ಸ್ಪಂದಿಸುವುದು, ಇದಕ್ಕೆ ಹೊರತಾಗಿ ನಕ್ಸಲರೊಂದಿಗೇ ಯಾವುದೇ ಮಾತುಕತೆ ಅಸಾಧ್ಯ ಎಂದು ಸಚಿವರು ಹೇಳಿದರು.
ಇದಕ್ಕೂ ಮುನ್ನ ಸಚಿವರು ಪುತ್ತಿಗೆ ಗ್ರಾಮ ಪಂಚಾಯತ್ ಗ್ರಾಮ ಯೋಜನೆಯಡಿ 1.50 ಕೋಟಿ ರೂ. ಯೋಜನೆಯಲ್ಲಿ ಸಮುದಾಯ ಭವನ ಹಾಗೂ ಇತರ ಕಾಮ ಗಾರಿಗಳ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಪಾಲ್ಗೊಂಡರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಭಯ ಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿ.ಪಂ. ಸಿಇಒ ಡಾ. ವಿಜಯ ಪ್ರಕಾಶ್, ಮಾಜಿ ಸಚಿವ ಅಮರನಾಥ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಭವ್ಯ ಗಂಗಾಧರ, ಜಿ.ಪಂ.ಸದಸ್ಯೆ ಸುನೀತಾ ಸುಚರಿತ ಶೆಟ್ಟಿ, ಮುಡದ ಅಧ್ಯಕ್ಷ ಬಾಹುಬಲಿ ಪ್ರಸಾದ್, ತಾ.ಪಂ.ಸದಸ್ಯ ಪ್ರಕಾಶ್, ಪಂಚಾಯತ್ ಅಧ್ಯಕ್ಷ ಶಶಿಧರ ನಾಯಕ್ ಉಪಸ್ಥಿತರಿದ್ದರು.