ಮಂಗಳೂರು, ಸೆಪ್ಟೆಂಬರ್.12: ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಸರಕಾರಿ ಪ್ರೌಢಶಾಲೆಯ ಅಭಿವೃದ್ಧಿಗೆ 25,48,000 ರೂ.ಗಳ ಅನುದಾನದಡಿ ನಿರ್ಮಿಸಲಾದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಮತ್ತು ನೂತನ ಕಟ್ಟಡವನ್ನು ಇಂದು ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ ರವಿಯವರು ಉದ್ಘಾಟಿಸಿದರು.
ತಮ್ಮ ಉದ್ಘಾಟನಾ ಭಾಷಣದಲ್ಲಿ, ಕೇವಲ ಕಟ್ಟಡದಿಂದ ಮಾತ್ರ ಶಾಲೆ ನಿರ್ಮಾಣವಾಗುವುದಿಲ್ಲ, ಅಲ್ಲಿ ದೊರಕುವ ಮೌಲ್ಯಯುತ ಶಿಕ್ಷಣವು ಮಕ್ಕಳ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಈ ನಿಟ್ಟಿನಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಕಲಿಸಿದರೆ ಸುಭದ್ರ ಭಾರತ ನಿರ್ಮಾಣ ಸಾಧ್ಯ ಎಂದು ಅವರು ನುಡಿದರು. ಮಾಜಿ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂ ನಮಗೆ ಮಾದರಿಯಾಗಲಿ.ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ; ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂದು ಹಾರೈಸಿದರು.
ಪುತ್ತೂರು ವಿಧಾನಸಭಾ ಸದಸ್ಯರಾದ ಶ್ರೀಮತಿ ಮಲ್ಲಿಕಾ ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ,ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಂಭುಭಟ್, ತಾಲೂಕು ಪಂಚಾಯತ್ ಸದಸ್ಯ ಮಹಮ್ಮದ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಫೌಜಿಯಾ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.