ಮಂಗಳೂರು, ಸೆಪ್ಟೆಂಬರ್.15 : ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಂಚೂಣಿಯಲಿದ್ದರೂ, ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯಡಿ ಸಾಧನೆ ದಾಖಲಿಸುವಲ್ಲಿ ದಕ್ಷಿಣ ಕನ್ನಡ ವಿಫಲವಾಗಿರುವುದು ವಿಷಾದದ ಸಂಗತಿಯೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ.ಶೈಲಜಾ ಭಟ್ ತಿಳಿಸಿದ್ದಾರೆ.
ಇಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ನಡೆದ ಮಾಸಿಕ ಕೆಡಿಪಿ ಸಮೀಕ್ಷಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಜನಪರ ಯೋಜನೆಯ ಅನುಷ್ಠಾನ ವಿಳಂಬಕ್ಕೆ ಕಾರ್ಯ ನಿರ್ವಹಣಾಧಿಕಾರಿಗಳು ಕಾರಣ ಕೊಡಿ ಎಂದು ಸೂಚಿಸಿದರು.
ಇತ್ತೀಚೆಗೆ ಹೈದರಾಬಾದ್ ನಲ್ಲಿ ಈ ಸಂಬಂಧದ ಕಾರ್ಯಕ್ರಮದಲ್ಲಿ ಇದೇ ಪ್ರಶ್ನೆಯನ್ನು ತಾನು ಎದುರಿಸಿದ್ದು, ಖಾತ್ರಿ ಯೋಜನೆ ಜಿಲ್ಲೆಯಲ್ಲಿ ಹೀಗ್ಯಾಕೆ ಎನ್ನುವುದಕ್ಕೆ ಉತ್ತರವಿರಲಿಲ್ಲ. ಹಾಗಾಗಿ ತನಗೆ ಮಾಹಿತಿ ನೀಡಿ ಎಂದು ಅಧ್ಯಕ್ಷರು ಕೇಳಿದಾಗ, ಈಗಾಗಲೇ ಜಿಲ್ಲೆಗೆ ನೀಡಿರುವ ಅನುದಾನವನ್ನು ಸದ್ಬಳಕೆ ಮಾಡುವ ಭರವಸೆಯನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ನೀಡಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸಚಿವರು ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ಅತ್ಯುತ್ಸಕರಾಗಿದ್ದು ಪ್ರತಿದಿನವೆಂಬಂತೆ ಬೆಂಗಳೂರಿನ ಕೇಂದ್ರ ಕಚೇರಿಯಿಂದ ವರದಿ ಕೇಳುತ್ತಿದ್ದರೆ, ವಾರಕ್ಕೊಮ್ಮೆ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿ ಕಾರ್ಯದರ್ಶಿಗಳು, ಪ್ರಗತಿ ಪರಿಶೀಲನೆ ಮಾಡಿ ದಕ್ಷಿಣಕನ್ನಡ ಹಿನ್ನಡೆಗೆ ಕಾರಣ ಕೇಳುತ್ತಿದ್ದಾರೆ. ಹೀಗಾಗಿ ಯಾವುದೇ ಕಾರಣ ನೀಡದೇ ಸಾಧನೆ ಮಾಡಿ ಅನುಪಾಲನಾ ವರದಿ ಕೊಡಿ ಎಂದರು.
ಯೋಜನಾ ನಿರ್ದೇಶಕರಾದ ಶ್ರೀಮತಿ ಸೀತಮ್ಮ ಅವರು ಮಾತನಾಡಿ, ಎಲ್ಲಾ ಪಂಚಾಯತ್ಗಳು ಪಂಚಾಯತಿಗೊಂದು ಕಾಯಕ ಬಂಧುಗಳನ್ನು ನೇಮಿಸಿಕೊಂಡು ಯೋಜನೆ ದುರುಪಯೋಗವಾಗದಂತೆ ಅನುಷ್ಠಾನಕ್ಕೆ ತರಲು ಸಾಧ್ಯವಿದೆ ಎಂದರು.
ಸಾಮಾಜಿಕ ಅರಣ್ಯ, ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆಗಳ ಸಹಕಾರದೊಂದಿಗೆ ಈಗಾಗಲೇ 866 ಲಕ್ಷ ರೂ.ಗಳ ಕ್ರಿಯಾ ಯೋಜನೆ ರೂಪಿಸಿ ಗ್ರಾಮ ಸಭೆಯಿಂದ ಅನುಮೋದನೆ ಪಡೆಯಲು ಸೂಚಿಸಿದರೂ ಸಂಬಂಧಪಟ್ಟವರು ಸ್ಪಂದಿಸುತ್ತಿಲ್ಲ. ಸೆಪ್ಟೆಂಬರ್ 10ರಿಂದ 20ರೊಳಗಾಗಿ ಕ್ರಿಯಾಯೋಜನೆ ಅನುಮೋದನೆಗೊಳ್ಳಬೇಕೆಂದರು. ಪ್ರತೀ ದಿನದ ಪ್ರಗತಿ ಕಳುಹಿಸಿ ಎಂದು ರಾಜ್ಯ ಸರ್ಕಾರದಿಂದ ಸೂಚನೆ ಬಂದಿದ್ದು ಅಧಿಕಾರಿಗಳು ಸ್ಪಂದಿಸುವಂತೆ ಕೋರಿದರು. ಬೀದಿ ಬದಿಗಳಲ್ಲಿ ಸಸಿ ಬೆಳೆಸಿ ಎಂಬ ಸೂಚನೆ ನೀಡಿದ ಬಳಿಕ ಸಸಿಗಳ ಲಭ್ಯತೆ ಇಲ್ಲ ಎಂಬ ಮಾಹಿತಿ ಈಗ ಲಭ್ಯವಾಗುತ್ತಿದ್ದು ಖಾಸಗಿ ನರ್ಸರಿಗಳಿಂದ ಖರೀದಿಸಿ ನಿಗದಿತ ಗುರಿ ಸಾಧಿಸಿ ಎಂದು ಯೋಜನಾ ನಿರ್ದೇಶಕರು ಹೇಳಿದರು.
ಯೋಜನೆ ಅನುಷ್ಠಾನದಲ್ಲಿ ಸಾಧನೆ ಆಗದಿದ್ದರೆ ಪಿಡಿಒ,ಇಒ ಮತ್ತು ಸಹಾಯಕ ನಿರ್ದೇಶಕರು ಹಾಗೂ ವಿಭಾಗ ಮುಖ್ಯಸ್ಥರನ್ನೆ ಹೊಣೆಗಾರರನ್ನಾಗಿಸುವುದು ಎಂದು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಎಚ್ಚರಿಕೆ ನೀಡಿದರಲ್ಲದೆ, ಉತ್ತರ ಕನ್ನಡದಂತಹ ಪ್ರದೇಶಗಳಲ್ಲಿ 300 ಕೋಟಿ ರೂ.ಗಳಷ್ಟು ಬಳಕೆಯಾದರೆ ನಮ್ಮ ಜಿಲ್ಲೆಗೆ ನೀಡಿದ 29.19 ಕೋಟಿ ರೂ.ಗಳನ್ನು ವೆಚ್ಚಮಾಡಲಾಗುತ್ತಿಲ್ಲ. ಮುಂದಿನ ಆರುತಿಂಗಳೊಳಗೆ ಪ್ರಗತಿ ದಾಖಲಿಸಲ್ಪಡಬೇಕೆಂದರು. ಸಾಕಷ್ಟು ಮಾಹಿತಿ ಕಾಯಿದೆಯ ಸಂಬಂಧ ನೀಡಿದ್ದು, ಮಾರ್ಗದರ್ಶಿ ಸೂತ್ರಗಳನ್ನು ಸ್ಪಷ್ಟಪಡಿಸಲಾಗಿದೆ ಎಂದರು.
ಶಾಲೆಗಳಲ್ಲಿ ಮಳೆ ನೀರಿನ ಕೊಯ್ಲು ನಿರ್ವಹಣೆಗೆ ಶಾಲಾ ನಿರ್ವಹಣಾ ನಿಧಿಯಿಂದ 5000 ರೂ.ಗಳನ್ನು ಖರ್ಚು ಮಾಡಿ ನಿರ್ವಹಿಸಿ ಎಂದು ಸಿಇಒ ಸೂಚಿಸಿದರು. ಈ ಸಂಬಂಧ ಈಗಾಗಲೇ ಮುಖ್ಯ ಯೋಜನಾಧಿಕಾರಿಗಳ ನೇತೃತ್ವದಲ್ಲಿ ಶಿಕ್ಷಣ ಇಲಾಖಾಧಿಕಾರಿಗಳ ಸಭೆ ನಡೆಸಲಾಗಿದೆ.
ಜಲಾನಯನ, ಪಂಚಾಯತ್ ರಾಜ್ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಿದರೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯ. ಆದರೆ ಸಣ್ಣ ನೀರಾವರಿ ಇಲಾಖೆಯವರು ಈ ಬಗ್ಗೆ ಯಾವುದೇ ರೀತಿಯ ಸಹಕಾರ ಸ್ಪಂದನ ನೀಡದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಇಒ ಅವರು, ಸಣ್ಣ ನೀರಾವರಿಯವರು ಕಳೆದ ಮೂರು ವರ್ಷಗಳಿಂದ ಅನುಷ್ಠಾನಗೊಳಿಸಿರುವ ಕಾಮಗಾರಿಗಳ ಸಮಗ್ರ ಮಾಹಿತಿ ಇಂದು ಸಂಜೆಯೊಳಗಾಗಿ ನೀಡಬೇಕೆಂದು ಸೂಚಿಸಿದರು.
2011-12ನೇ ಸಾಲಿನಲ್ಲಿ 86 ಕಾಮಗಾರಿಗಳು ಸಂಪೂರ್ಣಗೊಂಡಿದೆ. 68 ಕಾಮಗಾರಿಗಳು ಪ್ರಗತಿಯಲ್ಲಿದೆ. ಪ್ರಸಕ್ತ ಸಾಲಿನಲ್ಲಿ 40.99 ಕೋಟಿ ರೂ. ವೆಚ್ಚದಡಿ ನೂತನ 125 ಕಾಮಗಾರಿಗಳು ಆಗಬೇಕಿದೆ ಎಂದು ಇಂಜಿನಿಯರ್ ಮಾಹಿತಿ ನೀಡಿದರು. ಇನ್ನು ಪ್ರವಾಹ ನಿಯಂತ್ರಣ ಯೋಜನೆಯಡಿ 42ಕಾಮಗಾರಿಗಳು 708.6 ಲಕ್ಷ ರೂ.ವೆಚ್ಚದಲ್ಲಿ ಸಂಪೂರ್ಣಗೊಂಡಿವೆ. ಜಿಲ್ಲೆಗೆ ಈ ಯೋಜನೆಯಡಿ ಬಂದಿರುವ ಅನುದಾನ ಮುಗಿದ ಕಾಮಗಾರಿಗಳ ಬಗ್ಗೆ ಪ್ರಗತಿಯಲ್ಲಿರುವ ಬಗ್ಗೆ ಸಮಗ್ರ ವರದಿ ನೀಡಬೇಕಲ್ಲದೆ ಇಲಾಖೆ ಮುಖ್ಯಸ್ಥರೇ ಸಭೆಗೆ ಹಾಜರಾಗಬೇಕೆಂದು ಸಿಇಒ ಸೂಚಿಸಿದರು.
ತೋಟಗಾರಿಕೆ ಇಲಾಖೆಯಿಂದ ತಾರಸಿ ತೋಟದ ಬಗ್ಗೆ ಸ್ವಯಂ ಪ್ರೇರಣೆಯಿಂದ ಯೋಜನೆಗಳನ್ನು ಕೈಗೊಂಡಿದ್ದು, ನಗರದಲ್ಲಿ ಕುದ್ಮುಲ್ ರಂಗರಾವ್ ಮತ್ತು ಕದ್ರಿಯಲ್ಲಿರುವ ಆಶ್ರಮ ಶಾಲೆಗಳಲ್ಲಿ ತಾರಸಿ ತೋಟ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಸುರತ್ಕಲ್ ನ ಹೊಸಬೆಟ್ಟಿನಲ್ಲಿ 2 ಕೃಷಿಕರು ತಾರಸಿ ತೋಟ ಆರಂಭಿಸಲು ಉತ್ಸುಕರಾಗಿದ್ದಾರೆ. ಸಿಇಒ ಉಪಸ್ಥಿತಿಯುಲ್ಲಿ ಈ ಸಂಬಂಧ ಗೋವಿಂದದಾಸ ಕಾಲೇಜಿನಲ್ಲಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂಬಂಧ ವಿಜಯಾ ಬ್ಯಾಂಕ್ನ ಅಧ್ಯಕ್ಷರು ಆಸಕ್ತರಾಗಿದ್ದು, ಮಾತುಕತೆ ನಡೆಯಲಿದೆ ಎಂದು ಸಿಇಒ ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಹಾಗೂ ಆತ್ಮವಿಶ್ವಾಸ ಬೆಳೆಸುವ ಕ್ರಮಗಳನ್ನು, ಕ್ವಶ್ಚನ್ ಬ್ಯಾಂಕ್ ತಯಾರಿಸಲು ವಿಶೇಷ ಗಮನ ಹರಿಸಲಾಗಿದೆ ಎಂದರು.
ಘನತ್ಯಾಜ್ಯ ವಿಲೇವಾರಿಯ ಬಗ್ಗೆ ಕ್ರಮವಹಿಸಲಾಗಿದ್ದು, ಪ್ರಗತಿಯಲ್ಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ವಿವರಿಸಿದರು. ಹಲವು ಜಿಲ್ಲೆಗಳಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಜಾರಿತರಲಾಗಿದ್ದು, ಜಿಲ್ಲೆಯಲ್ಲಿ ನವೆಂಬರ್ ವೇಳೆಗೆ ಪ್ಲಾಸ್ಟಿಕ್ ನಿಷೇಧ ಚಾಲನೆಗೆ ಬರಲು ಪೂರ್ವತಯಾರಿ ನಡೆಸಬೇಕಿದೆ ಎಂದು ಸಿಇಒ ಹೇಳಿದರು.
ಜಿಲ್ಲಾ ಪಂಚಾಯತ್ ನಲ್ಲಿ ಕಳೆದ ಎರಡು ಸಭೆಗಳಲ್ಲಿ ಅಬಕಾರಿ ಇಲಾಖೆ ಮದ್ಯ ಮಾರಾಟ ನಿಯಂತ್ರಿಸುತ್ತಿಲ್ಲ ಹಾಗೂ ಮಾಹಿತಿ ನೀಡಿದ್ದನ್ನು ಸಂಬಂಧಪಟ್ಟವರಿಗೆ ತಲುಪಿಸಿ ದಾಳಿ ನಡೆಸುತ್ತಿದೆ ಎಂಬ ಜಿಲ್ಲಾ ಪಂಚಾಯತ್ ಸದಸ್ಯರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕೆಂದು ಸಿಇಒ ಸೂಚಿಸಿದರು. ಅಂಗವಿಕಲರಿಗೆ ಸೌಲಭ್ಯಗಳನ್ನು ಸ್ವೀಕರಿಸಿದ ಅರ್ಜಿಗಳ ಮುಖಾಂತರ ನೀಡದೆ ಎಲ್ಲರಿಗೂ ಸೌಲಭ್ಯಗಳನ್ನು ತಲುಪಿಸುವಲ್ಲಿ ಸ್ವಯಂಪ್ರೇರಿತ ಮಾಹಿತಿ ನೀಡಿ ಅರ್ಜಿ ಸ್ವೀಕರಿಸುವ ಕ್ರಮವಾಗಬೇಕೆಂದರು. ಅರ್ಜಿಗಳು ಬರಲಿಲ್ಲ ಎಂಬ ಕಾರಣ ಪ್ರಗತಿ ಪರಿಶೀಲನ ಸಭೆಯಲ್ಲಿ ನೀಡಬಾರದು ಎಂದು ಸಿಇಒ ಸ್ಪಷ್ಟಪಡಿಸಿದರು.
ಉಪಾಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮಿ ಜನಾರ್ಧನ್, ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷರಾದ ಜನಾರ್ಧನಗೌಡ, ಕೃಷಿ ಸ್ಥಾಯಿಸಮಿತಿ ಅಧ್ಯಕ್ಷರಾದ ನವೀನ್ ಕುಮಾರ್ ಮೇನಾಲ, ಉಪಕಾರ್ಯದರ್ಶಿಗಳಾದ ಶಿವರಾಮೇಗೌಡ, ಸಿಪಿಒ ಮೊಹಮ್ಮದ್ ನಝೀರ್, ಮುಖ್ಯ ಲೆಕ್ಕಾಧಿಕಾರಿ ಶೇಖ್ ಲತೀಫ್ ಅವರು ಉಪಸ್ಥಿತರಿದ್ದರು.