ಮಂಗಳೂರು,ಆಗಸ್ಟ್.12:ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 203 ಗ್ರಾಮ ಪಂಚಾಯತ್ ಗಳಲ್ಲಿ ವಾರದ ನಿರ್ದಿಷ್ಟ ದಿನವೊಂದನ್ನು `ಉದ್ಯೋಗ ಖಾತರಿ ದಿನ' ಎಂದು ಕಾದಿರುಸುವಂತೆ ಒಂಬುಡ್ಸಮನ್ ಶೀನ ಶೆಟ್ಟಿ ಸೂಚನೆ ನೀಡಿದ್ದಾರೆ.ಜಿಲ್ಲಾ ಪಂಚಾಯತ್ ನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕುರಿತಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಉದ್ಯೋಗ ಕಾತರಿ ದಿನದಂದು ಗ್ರಾ.ಪಂ. ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ, ಉದ್ಯೋಗ ಮಿತ್ರ ಉಪಸ್ಥಿತರಿದ್ದು, ಯೋಜನೆ ಕುರಿತಾಗಿ ಅವಲೋಕನ ನಡೆಸಬೇಕು. ಪಂಚಾಯತ್ ವ್ಯಾಪ್ತಿಯ ಉದ್ಯೋಗ ಚೀಟಿದಾರರ ಬೇಡಿಕೆ, ಸಮಸ್ಯೆಗಳನ್ನು ಆಲಿಸಿ ಇತ್ಯರ್ಥ ಪಡಿಸಬೇಕು ಎಂದರು.ಪಂಚಾಯತ್ ಮಟ್ಟದಲ್ಲಿರುವ ಜಾಗೃತಿ ಸಮಿತಿ ಹಾಗೂ ಸಾಮಾಜಿಕ ಲೆಕ್ಕ ಪರಿಶೋಧಕ ಸಮಿತಿಗಳನ್ನು ಬಲಪಡಿಸಬೇಕು. ಎಲ್ಲಾ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ವರ್ಷದ ಅಂತ್ಯದೊಳಗೆ ಕ್ರಿಯಾ ಯೋಜನೆಗಳು ತಯಾರಾಗಬೇಕು. ಮುಂದಿನ 3 ತಿಂಗಳುಗಳಲ್ಲಿ ಕ್ರಿಯಾ ಯೋಜನೆ ಅನುಷ್ಠಾನಕ್ಕೆ ಬೇಕಾದ ಸಿದ್ಧತೆಗಳು ಪೂರ್ಣಗೊಳ್ಳಬೇಕು.ಈ ರೀತಿಯಲ್ಲಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಎಲ್ಲಾ ಪಂಚಾಯತ್ ಗಳು ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಕಾಲಮಿತಿ ನಿಗದಿಪಡಿಸಿ ಮಾಹಿತಿ ಗೋಡೆ ಹಾಗೂ ಮಾಹಿತಿ ಫಲಕಗಳನ್ನು ಅಳವಡಿಸುವ ಕಾರ್ಯ ನಡೆಯಬೇಕು.ತಪ್ಪಿದರೆ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಂವಾದದಲ್ಲಿ ಪಾಲ್ಗೊಂಡ ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಅಭಿವೃದ್ಧಿ ಅಧಿಕಾರಿಗಳು, ಸರಕಾರೇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕ್ರಿಯಾ ಯೋಜನೆ ಸಿದ್ಧಪಡಿಸುವಲ್ಲಿ ಆಗುತ್ತಿರುವ ವಿಳಂಬ, ಆಡಳಿತ ಮಂಡಳಿಗಳ ನಿರಾಸಕ್ತಿ, ಅನುದಾನ ಲಭ್ಯತೆಯ ತೊಂದರೆಗಳ ಬಗ್ಗೆ ಚರ್ಚಿಸಿದರು.ಸಂವಾದದಲ್ಲಿ ಪಾಲ್ಗೊಂಡ ಬಹುತೇಕರು ಗ್ರಾಮೀಣ ಭಾಗಗಳಲ್ಲಿ ಯೋಜನೆಯ ಮಾಹಿತಿ ಕೊರತೆಯಿದೆ. ಜನತೆಗೆ ಹೆಚ್ಚೆಚ್ಚು ಮಾಹಿತಿ ನೀಡಿ ಜಾಗೃತಿಗೊಳಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುಂದಿನ ಕೆಲವೇ ದಿನಗಳಲ್ಲಿ ಎಲ್ಲಾ ತಾಲೂಕುಗಳಲ್ಲಿ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ಕಾರ್ಯಾಗಾರ ಮತ್ತು ಸಂವಾದವನ್ನು ಏರ್ಪಡಿಸಲಾಗುವುದು ಎಂದರು.
ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಎ.ಎನ್.ರಾಮದಾಸ್, ಉದ್ಯೋಗ ಖಾತರಿ ಯೋಜನೆಯ ಮಾರ್ಗದರ್ಶಿ ಅಧಿಕಾರಿ ಎನ್.ಸಿ. ಸೀತಮ್ಮ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷ ಸತೀಶ್, ತೋಟಗಾರಿಕಾ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.