ಮಂಗಳೂರು,ಆಗಸ್ಟ್.09:ಬಯಲು ಶೌಚಾಲಯ ಮುಕ್ತ, ಪ್ಲಾಸ್ಟಿಕ್ ತ್ಯಾಜ್ಯರಹಿತ ಸಂಪೂರ್ಣ ಸ್ವಚ್ಛ ಮಾದರಿ ಗ್ರಾಮ ನಿರ್ಮಾಣದ ಅಭಿಯಾನವೊಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದಲ್ಲಿ ಸದ್ದಿಲ್ಲದೆ ಆರಂಭವಾಗಿದೆ.ನರಿಂಗಾನ ಗ್ರಾಮ ಪಂಚಾಯತ್ ಮತ್ತು ಸಮಾಜ ಕಾರ್ಯ ಸಂಸ್ಥೆ ಜನಶಿಕ್ಷಣ ಟ್ರಸ್ಟ್ ನ ಸಹಯೋಗದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ, ಸೇವಾಸಕ್ತ ವ್ಯಕ್ತಿಗಳ ಸಕ್ರಿಯ ಪಾಲುದಾರಿಕೆಯೊಂದಿಗೆ ಈ ಆಂದೋಲನ ಈಗಾಗಲೇ ಪ್ರಾರಂಭವಾಗಿದ್ದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಾದರಿ ಗ್ರಾಮ ನಿರ್ಮಾಣ ಕುರಿತು ಈಗಾಗಲೇ 11 ಸಭೆಗಳನ್ನು ನಡೆಸಲಾಗಿದೆ.ಗ್ರಾಮದ ಪ್ರತಿ ಮನೆ ಮಂದಿಯನ್ನು ಈ ಅಭಿಯಾನದಲ್ಲಿ ಸ್ವಯಂ ಪ್ರೇರಣೆಯಿಂದ ಸೇರುವಂತೆ ಪ್ರೇರೆಪಿಸುವ ಉದ್ದೇಶದಿಂದ ಶಾಲಾ ಮಕ್ಕಳೊಂದಿಗೆ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ದಿನಾಂಕ 8.08.2011ರಂದು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ 30 ಜನರ ಸ್ವಯಂ ಸೇವಕರ ತಂಡ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 5ಗಂಟೆಯವರೆಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ 7 ಶಾಲೆಗಳಿಗೆ ಭೇಟಿ ನೀಡಿ ಪ್ರತಿ ಶಾಲೆಗಳಲ್ಲಿ ಮಕ್ಕಳ ಸ್ವಚ್ಛತಾ ಸಮಾವೇಶ ಏರ್ಪಡಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂಪೂರ್ಣ ಸ್ವಚ್ಛ ಮಾದರಿ ಗ್ರಾಮ ನಿರ್ಮಾಣದ ಕುರಿತ ಮುಕ್ತ ಸಂವಾದ ವಿಚಾರ ವಿನಿಮಯ ನಡೆಸಿ ಸ್ವಚ್ಛತೆಗಾಗಿ ನಡೆಯುವ ಸಾಮಾಜಿಕ ಚಳುವಳಿಯಲ್ಲಿ ಗ್ರಾಮದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪಾತ್ರದ ಬಗ್ಗೆ ಮನವರಿಕೆ ಮಾಡುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಇದೇ ರೀತಿಯ ಕಾರ್ಯಕ್ರಮಗಳನ್ನು ವಾರ್ಡ್ ಮಟ್ಟದಲ್ಲಿ ನಡೆಸಿ ಗ್ರಾಮಸ್ಥರು ಹಾಗೂ ವರ್ತಕರನ್ನು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮನವೊಲಿಸಿ ಸ್ವಚ್ಛತಾ ಕಾರ್ಯವನ್ನು ಸಾಮೂಹಿಕವಾಗಿ ಮತ್ತು ನಿರಂತರವಾಗಿ ನಡೆಸುತ್ತ ಸ್ವಚ್ಛತಾ ಸಂಸ್ಕೃತಿಯನ್ನು ಗ್ರಾಮಸ್ಥರಲ್ಲಿ ಬೆಳೆಸುವ ಮೂಲಕ ಮಾದರಿ ಗ್ರಾಮ ನಿರ್ಮಾಣದ ಪ್ರಯೋಗ ನರಿಂಗಾನದಲ್ಲಿ ಯಶಸ್ವಿಯಾಗಿ ಮುನ್ನಡೆಯಲಿದೆ.ಈ ಶಾಲಾ ಮಕ್ಕಳ ಸ್ವಚ್ಛತಾ ಜಾಗೃತಿ ಅಭಿಯಾನ ತಂಡದಲ್ಲಿ ಉದ್ಯೋಗ ಖಾತರಿ ಯೋಜನೆಯ ಒಂಬುಡ್ಸಮನ್, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾ.ಪ ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ನೌಕರರು, ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕರು, ಸಂಯೋಜಕರು, ಆಶಾ ಕಾರ್ಯಕರ್ತರು, ಅಪ್ನಾದೇಶ್ ಸ್ವಯಂ ಸೇವಕರು, ಸ್ಥಳೀಯ ಸಾಮಾಜಿಕ ಕಾರ್ಯಕರ್ತರು, ಮುಖಂಡರು, ಪತ್ರಕರ್ತರು ಸೇರಿದಂತೆ 30 ಜನರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ 7 ಶಾಲೆಗಳ 2,382 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿ ಸಂಪೂರ್ಣ ಸ್ವಚ್ಛತೆ ಮತ್ತು ಮಾದರಿ ಗ್ರಾಮ ಅಭಿವೃದ್ಧಿ ಅಭಿಯಾನದ ಯಶಸ್ವಿಗೆ ಸಹಕರಿಸಲು ಸಂಕಲ್ಪ ಮಾಡಿರುತ್ತಾರೆ.