ಮಂಗಳೂರು,ಆಗಸ್ಟ್.18:ಅನುದಾನಿತ ಶಾಲೆಗಳ ಶಿಕ್ಷಕರಿಗೊಂದು ಅನುಪಾತ, ಸರಕಾರಿ ಶಾಲೆಗಳ ಶಿಕ್ಷಕರಿಗೊಂದು ಅನುಪಾತ ಸರಿಯಾದ ಕ್ರಮವಲ್ಲ. ಈ ರೀತಿ ಮಾಡುವುದರಿಂದ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉದ್ಭವಿಸಲಿದೆ. ಸರಕಾರಿ ಶಾಲೆಗಳಂತೆ ಖಾಸಗಿ ಅನುದಾನಿತ ಶಾಲೆಗಳಲ್ಲೂ 30 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರಂತೆ ನಿಯಮ ಜಾರಿಗೊಳಿಸಬೇಕು. 40 ಮಕ್ಕಳಿಗೆ ಓರ್ವ ಶಿಕ್ಷಕರೆಂಬ ನೀತಿಯನ್ನು ಕೈ ಬಿಡಬೇಕು ಎಂದು ಕೆಲವು ಜಿ.ಪಂ. ಸದಸ್ಯರು ಅಭಿಪ್ರಾಯಪಟ್ಟರು.
ಈ ಬಗ್ಗೆ ನಿರ್ಧಾರ ಕೈಗೊಂಡು ಸರಕಾರಕ್ಕೆ ಕಳುಹಿಸಿ ಕೊಡುವಂತೆ ಸದಸ್ಯರು ಒತ್ತಾಯಿಸಿದರು. ವಿಷಯದ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಸರಕಾರಿ ಶಾಲೆಗಳಿಗೆ ಅನ್ವಯಿಸುವ ನಿಯಮವನ್ನೇ ಅನುದಾನಿತ ಶಾಲೆಗಳಿಗೂ ಜಾರಿಗೊಳಿಸುವ ಬಗ್ಗೆ ಸಚಿವರು ಭರವಸೆ ನೀಡಿರುವರೆಂದು ಜಿ.ಪಂ. ಅಧ್ಯಕ್ಷರಾದ ಕೆ ಟಿ ಶೈಲಜಾ ಭಟ್ ಸಭೆಗೆ ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿ.ಪಂ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಸಾಮಾಜಿಕ ಹಿತರಕ್ಷಣೆಯನ್ನು ಗಮನದಲ್ಲಿರಿಸಿ ಜಿಲ್ಲೆಯ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ನುಡಿದರು.
ಈ ಸಂಬಂಧ ಹಮ್ಮಿಕೊಂಡಿರುವ ಕೌನ್ಸಿಲಿಂಗ್ ನ್ನು ಮುಂದೂಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮ ಪಂಚಾಯತನ್ನು ವಿಸರ್ಜಿಸಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಸಮ್ಮತಿಸಿದೆ.
ಹಿರೇಬಂಡಾಡಿ ಗ್ರಾ.ಪಂ.ನ್ನು ವಿಸರ್ಜಿಸುವ ಕುರಿತಾದ ಅನುಪಾಲನಾ ವರದಿ ಮೇಲೆ ಚರ್ಚೆ ನಡೆದಾಗ ಬಿಜೆಪಿ ಸದಸ್ಯರು ಅದನ್ನು ವಿಸರ್ಜಿಸಲು ಬೆಂಬಲಿಸಿದರು. ಕಾಂಗ್ರೆಸ್ ಪಕ್ಷದ ಸದಸ್ಯರು ಶಾಸಕ ಬಿ.ರಮಾನಾಥ ರೈ ಸಹಿತ ಪ್ರಸ್ತಾಪವನ್ನು ಬಲವಾಗಿ ವಿರೋಧಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ನಡವಳಿಕೆಗಳು ಸೂಕ್ತವಾದುದಲ್ಲ. ಪಂಚಾಯತ್ ಗಳನ್ನು ವಿಸರ್ಜಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ಅಡಿಗಲ್ಲು ಹಾಕುವುದು ಸರಿಯಾದ ಕ್ರಮ ಅಲ್ಲ ಎಂದು ಕಾಂಗ್ರೆಸಿಗರು ವಾದಿಸಿದರು.
ಹಿರೇಬಂಡಾಡಿ ಗ್ರಾ.ಪಂ.ಗೆ ಕಾನೂನಿಗೆ ಅನುಗುಣವಾಗಿ ಅವಕಾಶಗಳನ್ನು ನೀಡಲಾಗಿದೆ. ಆದರೆ ಗ್ರಾಮ ಪಂಚಾಯತ್ ತಾ.ಪಂ. ಮತ್ತು ಜಿ.ಪಂ. ನೀಡಿರುವ ಅವಕಾಶಗಳನ್ನು ಬಳಸಿಕೊಂಡು ಸಭೆ ನಡೆಸುವಲ್ಲಿ ಯಶಸ್ವಿಯಾಗಿರಲಿಲ್ಲ. ಆದುದರಿಂದ ಗ್ರಾ.ಪಂ. ಆಡಳಿತ ಮಂಡಳಿಯನ್ನು ವಿಸರ್ಜಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷರು ಪ್ರಕಟಿಸಿದರು.
ಗ್ಯಾಸ್ ಪೈಪ್ ಲೈನ್:
ಕೊಚ್ಚಿ -ಬೆಂಗಳೂರು ಗ್ಯಾಸ್ ಪೈಪ್ ಲೈನ್ ಗೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಒಂದೂವರೆ ಅಡಿ ಅಗಲದ ಪೈಪ್ಗಾಗಿ 60 ಅಡಿ ಸ್ವಾಧೀನ ಪಡಿಸಿಕೊಳ್ಳುವ ಅವಶ್ಯಕತೆ ಏನಿದೆ ಎಂಬ ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, ಗ್ಯಾಸ್ ಪೈಪ್ ಲೈನ್ ಭೂ ಸ್ವಾಧೀನ ಕುರಿತು ಶೀಘ್ರ ಅಧಿಕಾರಿಗಳ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಗತಿ ಕುಂಠಿತವಾಗಿದೆ. ಹೆಚ್ಚಿನ ಗ್ರಾಮ ಪಂಚಾಯತ್ ಗಳು ಈ ತನಕ 2011 -12ನೇ ಸಾಲಿನ ಕಾಮಗಾರಿಯನ್ನು ಆರಂಭಿಸಿಲ್ಲ. ಅಂತಹ ಗ್ರಾ.ಪಂ.ಗಳ ವಿರುದ್ಧ ಕ್ರಮ ಜರಗಿಸಬೇಕು ಎಂದು ಅನೇಕ ಸದಸ್ಯರು ಒತ್ತಾಯಿಸಿದರು.
ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ವಿಳಂಬ ಸಾಧುವಲ್ಲ. ಮುಂದಿನ ಒಂದು ತಿಂಗಳೊಳಗೆ ಆಂದೋಲನದ ರೂಪದಲ್ಲಿ ಯೋಜನೆಯನ್ನು ಎಲ್ಲಾ ಗ್ರಾ.ಪಂ.ಗಳು ಕೈಗೆತ್ತಿಕೊಳ್ಳುವಂತೆ ಕಟ್ಟು ನಿಟ್ಟಿನ ಕ್ರಮ ಜರಗಿಸಲಾಗುವುದು ಎಂದು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಭೆಗೆ ತಿಳಿಸಿದರು.
ನಮ್ಮ ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳು ನಿರ್ಮಲ ಪುರಸ್ಕಾರ ಪಡೆದಿವೆ. ಇಂತಿರುವಾಗ ನಗರದ ಕಸವನ್ನು ನಗರದಲ್ಲಿಯೇ ವಿಲೇ ಮಾಡುವ ಬದಲಾಗಿ ಹಳ್ಳಿಗಳಿಗೆ ತಂದು ಸುರಿಯುವುದು ಸರಿಯೇ ಎಂಬ ಪ್ರಶ್ನೆಗೆ,ತಕ್ಷಣಕ್ಕೆ ಈ ವಿಷಯದ ಕುರಿತು ಪ್ರತಿಕ್ರಿಯಿಸುವುದು ಸಾಧ್ಯವಾಗದು. ಪರಿಸರ ಅಧಿಕಾರಿಗಳ ಜೊತೆ ಜಿಲ್ಲಾಪಂಚಾಯತ್ಮುಖ್ಯ ಯೋಜನಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವರು. ಬಳಿಕ ಘಟಕದ ಕುರಿತು ನಿಧರ್ಾರ ಕೈಗೊಳ್ಳಲಾಗುವುದು ಎಂದು ವಿಜಯ ಪ್ರಕಾಶ್ ಸಭೆಗೆ ತಿಳಿಸಿದರು.
ಐಟಿಡಿಪಿ ಅಧಿಕಾರಿ ಎಸ್.ಆರ್. ಪಟಾಲಪ್ಪ ವಂಚನೆ ಪ್ರಕರಣವನ್ನು ಸಿಐಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಸರಕಾರದ ಪ್ರಮುಖ ಏಜೆನ್ಸಿಯೊಂದು ಪ್ರಕರಣವನ್ನು ಕೈಗೆತ್ತಿಕೊಂಡಿರುವಾಗ ಸದನ ಸಮಿತಿ ರಚಿಸಿ ಪರ್ಯಾಯ ತನಿಖೆ ನಡೆಸುವುದು ಸೂಕ್ತವಲ್ಲ ಮತ್ತು ದಾಖಲೆಗಳನ್ನು ಸಿಐಡಿಗೆ ನೀಡಬೇಕಾಗಿರುವುದರಿಂದ ಸದನ ಸಮಿತಿ ರಚನೆಯ ಪ್ರಸ್ತಾಪವನ್ನು ಕೈ ಬಿಡಲಾಗಿದೆ ಎಂದು ಸಿಇಒ ಸಭೆಗೆ ವಿವರಿಸಿದರು.
ಜಿ.ಪಂ. ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ದನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ದನ ಗೌಡ ಈಶ್ವರ ಕಟೀಲು, ನವೀನಕುಮಾರ ಮೇನಾಲ ಹಾಜರಿದ್ದರು.