ಮಂಗಳೂರು,ಆಗಸ್ಟ್.18: ದಿನಾಂಕ 26-7-11 ರಂದು ನಡೆದ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಕಾರ್ಯಕಾರಿ ಮತ್ತು ಸಲಹಾ ಸಮಿತಿ ಸಭೆಯಲ್ಲಿ ಬಾಲ ಕಾರ್ಮಿಕರ ನೇಮಕಾತಿಗೆ ಸಂಬಂಧಿಸಿದ 2009-10 ಮತ್ತು 2010-11 ನೇ ಸಾಲಿನ ಪ್ರಕರಣಗಳಲ್ಲಿ ಬಾಲಕಾರ್ಮಿಕರನ್ನು ನೇಮಿಸಿಕೊಂಡಿದ್ದ ಮಾಲೀಕರಿಂದ ರೂ.20000/- ಗಳನ್ನು ಜಿಲ್ಲಾ ಬಾಲ ಕಾರ್ಮಿಕ ಪುನರ್ವಸತಿ ಮತ್ತು ಕಲ್ಯಾಣ ನಿಧಿಗೆ ವಸೂಲಾತಿ ಮಾಡಲು ಬಾಕಿ ಇರುವುದನ್ನು ಪರಿಶೀಲಿಸಿದ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಅಧ್ಯಕ್ಷರಾದ ಜಿಲ್ಲಾಧಿಕಾರಿ,ದ.ಕ.ಜಿಲ್ಲೆ ಮಂಗಳೂರು ಇವರು ಸಂಬಂಧಿಸಿದ ಮಾಲೀಕರಿಂದ ಶೀಘ್ರ ವಸೂಲಾತಿಗೆ ಕ್ರಮ ಕೈಗೊಳ್ಳುವಂತೆ ನೀಡಿದ ನಿರ್ದೇಶನದಂತೆ ಪ್ರಸ್ತುತ ಎರಡು ಪ್ರಕರಣಗಳಲ್ಲಿ ಒಂದರಲ್ಲಿ ರೂ.20000/- ಹಾಗೂ ಮತ್ತೊಂದರಲ್ಲಿ ರೂ.10,000/-(4 ಕಂತುಗಳಲ್ಲಿ ವಸೂಲಿ ಮಾಡುವ ಷರತ್ತಿನೊಂದಿಗೆ ) ಮೊತ್ತವನ್ನು ವಸೂಲಿ ಮಾಡಲಾಗಿದೆ.ಉಳಿದ ಪ್ರಕರಣಗಳಲ್ಲಿ ಕ್ರಮ ಪ್ರಗತಿಯಲ್ಲಿರುತ್ತದೆ.ಮನೆ ಕೆಲಸ, ಹೊಟೇಲ್,ಡಾಬಾ ರೆಸ್ಟೊರೆಂಟ್, ಕಟ್ಟಡ ನಿರ್ಮಾಣ ಮೊದಲಾದ ಅಪಾಯಕಾರಿ ಉದ್ಯೋಗ ಮತ್ತು ವೃತ್ತಿಗಳಲ್ಲಿ 14 ವರ್ಷ ವಯಸ್ಸು ತುಂಬದ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದೆಂದು,ನೇಮಿಸಿಕೊಂಡಲ್ಲಿ ಅದು ಕಾನೂನು ರೀತ್ಯ ಶಿಕ್ಷಾರ್ಹ ಅಪರಾಧವಾಗುತ್ತದೆಂಬುದಾಗಿ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ,ಮಂಗಳೂರು ಇವರು ತಿಳಿಸಿದ್ದಾರೆ.