ಮಂಗಳೂರು,ಆಗಸ್ಟ್.03:ತೋಟಗಾರಿಕೆಗೆ ಜಿಲ್ಲೆಯಲ್ಲಿ ವಿಫುಲ ಅವಕಾಶವಿದ್ದು ತೋಟಗಾರಿಕಾ ಅಧಿಕಾರಿಗಳು ತಮ್ಮ ಉಳಿದ ಯೋಜನೆಗಳ ಜೊತೆಗೆ ರಾಜ್ಯಕ್ಕೆ ಮಾದರಿಯಾಗುವಂತಹ ತೋಟವೊಂದನ್ನು ಅಭಿವೃದ್ಧಿ ಪಡಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು.ಅವರಿಂದು ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಫಲಾನುಭವಿಗಳನ್ನು ಗುರುತಿಸಲು ಹಾಗೂ ತೋಟಗಾರಿಕಾ ಬೆಳೆಗಳನ್ನು ಅಭಿವೃದ್ಧಿಪಡಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಮಾದರಿ ತೋಟ ನಿರ್ಮಾಣಕ್ಕೆ ಕ್ರಿಯಾಯೋಜನೆ ಯೊಂದನ್ನು ರೂಪಿಸಲು ಮಾರ್ಗದರ್ಶನ ನೀಡಿದರು. ರಾಷ್ಟ್ರೀಯ ತೋಟಗಾರಿಕಾ ಯೋಜನೆಯ ನೆರವಿನೊಂದಿಗೆ ಇಲಾಖೆಯ ಜೊತೆಗೆ ಕೃಷಿಕರನ್ನು ಸಬಲೀಕರಿಸುವ ಯೋಜನೆಗಳು ಇಲಾಖೆಯಿಂದ ಆಗಬೇಕಿದೆ ಎಂದರು.
ಅಂಬೇಡ್ಕರ್ ಕಾರ್ಪೋರೇಷನ್ ಕಚೇರಿಗೆ ಭೇಟಿ:ಅಧಿಕಾರ ವಹಿಸಿಕೊಂಡ ಮೂರನೇ ದಿನ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅಂಬೇಡ್ಕರ್ ಕಾರ್ಪೋರೇಷನ್ ಮತ್ತು ಎಸ್ ಟಿ ಕಾರ್ಪೋರೇಷನ್ ಕಚೇರಿಗೆ ಭೇಟಿ ನೀಡಿದ ಸಿಇಒ ಅವರು,ಪರಿಶಿಷ್ಟ ಜಾತಿ/ವರ್ಗಕ್ಕೆ ಮೀಸಲಿಟ್ಟ ನೇರ ಸಾಲ, ಕಿರು ಸಾಲ, ಗಂಗಾಕಲ್ಯಾಣ ಯೋಜನೆಯಡಿ ಭೌತಿಕ ಮತ್ತು ಆರ್ಥಿಕ ಗುರಿ ಸಾಧಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿದರು.ಇಲಾಖೆಯಲ್ಲಿ ಪ್ರಸಕ್ತ ಅಧಿಕಾರಿಯಾಗಿರುವ ಶ್ರೀಮತಿ ಸುನಂದ ಅವರು ಗೈರು ಹಾಜರಾಗಿದ್ದು ಇಲಾಖೆಯಲ್ಲಿ ಅಧಿಕಾರಿಗಳಿರಲಿಲ್ಲ. ನಿಗದಿತ ಗುರಿ ಸಾಧಿಸಲು ಸಂಬಂಧಪಟ್ಟವರಿಗೆ ಸೂಚಿಸಿ ಸೂಕ್ತ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು.