ಮಂಗಳೂರು,ಡಿಸೆಂಬರ್.03:ಸುವರ್ಣ ಗ್ರಾಮೋದಯ ಯೋಜನೆಯಡಿ ಬಂಟ್ವಾಳ ತಾಲೂಕಿಗೆ 8 ಪ್ಯಾಕೇಜ್ ಗಳನ್ನು ನೀಡಲಾಗಿದ್ದು, ಎಲ್ಲ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ವರದಿ ಬಂದಿದ್ದರೂ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು.
ಅವರು ಡಿ.2ರಂದು ಬಂಟ್ವಾಳ ತಾಲೂಕು ಪಂಚಾಯಿತಿ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಸಿಇಒ ಅವರು, ಯೋಜನೆಗಳಿಗೆ ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸಿದರು.
ತಾಲೂಕಿನ ಇಂಜಿನಿಯರ್ ವಿಭಾಗದ ಕಾಮಗಾರಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಇಒ ಅವರು, 09-10ನೇ ಸಾಲಿನಲ್ಲಿ ರಸ್ತೆ ಮರುಡಾಮರೀಕರಣಕ್ಕೆ ಸಂಬಂಧಿಸಿದ ಯೋಜನೆ ಕಾರ್ಯಾನುಷ್ಠಾನಗೊಂಡಿಲ್ಲ; ಇನ್ನೂ 34 ಕಾಮಗಾರಿಗಳಿಗೆ ಸುವರ್ಣಗ್ರಾಮೋದಯ ಯೋಜನೆಯಡಿ ಚಾಲನೆ ನೀಡಿಲ್ಲ; ಕಾಮಗಾರಿ ಗುಣಮಟ್ಟವಂತೂ ಕಳಪೆಯಾಗಿದೆ ಎಂದ ಸಿಇಒ ಕರ್ತವ್ಯ ನಿರ್ಲಕ್ಷಿಸಿದರೆ ಪರಿಣಾಮ ಎದುರಿಸಿ ಎಂದು ಎಚ್ಚರಿಕೆ ನೀಡಿದರು.
ಬಿಸಿಎಂ ಕಚೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದ ಸಿಇಒ ಅವರು, ಮಕ್ಕಳಿಗಾಗಿ ಆರಂಭಿಸಬೇಕಿದ್ದ ವ್ಯಕ್ತಿತ್ವ ವಿಕಸನ ತರಬೇತಿಯನ್ನು ಕಡ್ಡಾಯವಾಗಿ ಆರಂಭಿಸಿ ಎಂದರಲ್ಲದೆ ಅದರಿಂದ ಮಕ್ಕಳಿಗಾಗುವ ನೆರವನ್ನು ವಿವರಿಸಿದರು.
ಮಕ್ಕಳಿಗೆ ಬಿಸಿಎಂ ಇಲಾಖೆಯಿಂದ ನೀಡಿರುವ ಸೌಲಭ್ಯಗಳಪಟ್ಟಿಯನ್ನು ಪರಿಶೀಲಿಸಿದರು. ಇಒ ವಸಂತರಾಜ್ ಶೆಟ್ಟಿ ಮತ್ತು ಇತರ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.