ಮಂಗಳೂರು,ಅಕ್ಟೋಬರ್.03:ಜಿಲ್ಲೆಯ ಸ್ವಸಹಾಯ ಸಂಘದ ಮಹಿಳೆಯರ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ಮಹಿಳೆಯರಿಗಾಗಿಯೇ ಐದು ಕೋಟಿ ರೂ. ಬಂಡವಾಳದೊಂದಿಗೆ ವಿವಿದೋದ್ದೇಶ ಸಹಕಾರಿ ಬ್ಯಾಂಕ್ ಆರಂಭಿಸುವ ಯೋಜನೆ ಇದೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶ್ರೀಮತಿ ಸರೋಜನಿ ಭಾರದ್ವಾಜ್ ಅವರು ತಿಳಿಸಿದರು.
ಮಂಗಳೂರಿನಲ್ಲಿ ಮಹಿಳಾ ಅಭಿವೃದ್ಧಿ ನಿಗಮ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಉದ್ಯೋಗಿನಿ ಯೋಜನೆಯ ಫಲಾನುಭವಿಗಳು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನಾ ಸಮಾರಂಭದ ವೇಳೆ ಅವರು ಸುದ್ದಿಗಾರರಿಗೆ ನಿಗಮದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಬೀದಿ ಬದಿ ಮಹಿಳಾ ವ್ಯಾಪಾರಿಗಳಿಗೆ ಕಿರುಸಾಲವನ್ನು ಒದಗಿಸುವ ನಿಟ್ಟಿನಲ್ಲಿ ಜೀವನ ಸಾಥಿ ಎಂಬ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಶಿವಮೊಗ್ಗದಲ್ಲಿ ಈ ಯೋಜನೆ ಆರಂಭಗೊಂಡಿದೆ. ಬೀದಿ ಬದಿ ವ್ಯಾಪಾರ ನಡೆಸುವ ಮಹಿಳೆಗೆ 500ರಿಂದ 5000ರದವರೆಗಿನ ಸಾಲವನ್ನು ಈ ಯೋಜನೆಯಡಿ ವಿತರಿಸಲಾಗುವುದು ಎಂದು ಅವರು ತಿಳಿಸಿದರು.ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರ ಸಬಲೀಕರಣಕ್ಕೆ ಪೂರಕ ಕಾರ್ಯಕ್ರಮ ರೂಪಿಸಲು ಕಳೆದ ಫೆಬ್ರವರಿ ತಿಂಗಳಿನಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈಗಾಗಲೇ 14 ಕಡೆಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದು, ಇಂದು ರಾತ್ರಿ ಪುತ್ತೂರು ಆರ್ಯಾಪುವಿನ ಬಿಂದು ಸದಾಶಿವ ಅವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವುದಾಗಿ ಅವರು ತಿಳಿಸಿದರು.
ರಾಜ್ಯ ಸಂಪನ್ಮೂಲ ಕೇಂದ್ರ ಯೋಜನೆಯಡಿ ಮಹಿಳಾ ಸ್ವ ಉದ್ಯೋಗ ಸಲಹಾ ಕೇಂದ್ರ ಸ್ಥಾಪಿಸಲುದ್ದೇಶಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಈ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಉದ್ಯೋಗಿನಿ ಯೋಜನೆಯಡಿ ಮಹಿಳೆಯರು ಸ್ವ ಉದ್ಯೋಗವನ್ನು ಮಾಡುವಲ್ಲಿ ಗರಿಷ್ಠ 1 ಲಕ್ಷ ರೂ.ವರೆಗೆ ಸಾಲ ಮತ್ತು ಸಹಾಯ ಧನ ನೀಡಲಾಗುತ್ತದೆ. ಮಂಗಳೂರಿನ 15 ಗುಂಪುಗಳಿಂದ ಸಾಲಕ್ಕಾಗಿ ಅರ್ಜಿ ಬಂದಿದೆ ಎಂದವರು ತಿಳಿಸಿದರು.