Tuesday, October 4, 2011

ನಿಗದಿತ ಗುರಿ ಸಾಧಿಸಿ: ಸಂಸದ ನಳಿನ್ ಕುಮಾರ್

ಮಂಗಳೂರು,ಅಕ್ಟೋಬರ್. 04 : ಇಂದಿರಾ ಆವಾಸ್ ಮತ್ತು ಬಸವ ಇಂದಿರಾ ವಸತಿ ಯೋಜನೆಯಡಿ ನಿಗದಿತ ಗುರಿ ಸಾಧಿಸಿ ಎಂದು ದಕ್ಷಿಣ ಕನ್ನಡ ಲೋಕ ಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.
ಇಂದು ಜಿಲ್ಲಾ ಪಂಚಾ ಯತ್ ನಲ್ಲಿ ಕೇಂದ್ರ ನೆರವಿನ ಗ್ರಾಮೀಣಾ ಭಿವೃದ್ಧಿ ಕಾರ್ಯ ಕ್ರಮಗಳ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಅಧಿಕಾರಿಗಳು ಮತ್ತು ಇಂಜಿನಿಯರ್ ಗಳು, ಗುತ್ತಿಗೆದಾರರು ಸಮನ್ವಯತೆಯಿಂದ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ದಾಖಲಿಸಲು ಸಾಧ್ಯ ಎಂದರು. ಇಲ್ಲದಿದ್ದರೆ ಎರಡು ವರ್ಷಗಳ ಮೊದಲೇ ಅನುದಾನ ಮಂಜೂರಾಗಿದ್ದರೂ ಕೆಲಸ ಸಂಪೂರ್ಣಗೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗುರಿ ಸಾಧನೆಗಾಗಿ ಅಧಿಕಾರಿಗಳು ಪ್ರತಿ ತಿಂಗಳು ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಪ್ರಗತಿ ದಾಖಲಿಸುವಂತೆ ಸಂಸದರು ನಿರ್ದೇಶನ ನೀಡಿದರು.
ಅನುದಾನ ವ್ಯತ್ಯಯವಾದರೆ ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ನುಡಿದ ಅವರು, ಮುಖ್ಯವಾಗಿ ವಸತಿ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಪರಿಶೀಲಿಸಿದರು.
ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ ಜಿಲ್ಲೆಯಲ್ಲಿ 2011-12ರ ತನಕ ಒಟ್ಟು 69 ಪ್ಯಾಕೇಜ್ ಗಳು ಮಂಜೂರಾಗಿದ್ದು ಇದರಲ್ಲಿ ಒಟ್ಟು 140 ಕಾಮಗಾರಿಗಳು ಮಂಜೂರಾಗಿರುತ್ತದೆ. ಆಗಸ್ಟ್ 2011ರ ಅಂತ್ಯಕ್ಕೆ ಒಟ್ಟು 57 ಪ್ಯಾಕೇಜ್ ಗಳನ್ನು ಅನುಷ್ಠಾನ ಗೊಳಿಸಲಾಗಿದ್ದು 12 ಪ್ಯಾಕೇಜ್ ಗಳು ಪ್ರಗತಿಯಲ್ಲಿದೆ. ಈ ಕಾಮಗಾರಿಗಳಿಗೆ ಈತನಕ ಒಟ್ಟು 18722.28 ಲಕ್ಷ ಖರ್ಚು ಮಾಡಲಾಗಿದೆ ಎಂದು ಸಭೆಯಲ್ಲ ಮಾಹಿತಿ ನೀಡಲಾಯಿತು.
ಇಂದಿರಾ ಆವಾಸ್ ಯೋಜನೆ ಮತ್ತು ಬಸವ ಇಂದಿರಾ ಯೋಜನೆಯಡಿ 10-11ರ ಸಾಲಿನ ಮನೆಗಳನ್ನು ಡಿಸೆಂಬರ್ ಒಳಗಡೆ ಸಂಪೂರ್ಣಗೊಳಿಸಬೇಕೆಂದ ಸಂಸದರು, 2011-12ರ ಸಾಲಿನ ಮನೆಗಳನ್ನು ಮಾಚ್ರ್ ಅಂತ್ಯಕ್ಕೆ ಪೂರ್ಣಗೊಳಿಸಬೇಕೆಂದು ಕಾರ್ಯನಿರ್ವ ಹಣಾಧಿಕರಿಗಳಿಗೆ ಸೂಚಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ರಾಜೀವ್ ಗಾಂಧಿ ಸೇವಾ ಕೇಂದ್ರಗಳ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದ ಅವರು, ಸಣ್ಣ ಮತ್ತು ಅತಿಸಣ್ಣ ರೈತರ ಪಾಲ್ಗೊಳ್ಳುವಿಕೆಗೆ ತಹಸೀಲ್ದಾರ್ ನೀಡಿದ ಪಟ್ಟಿಯನ್ನು ಅಂತಿಮವಾಗಿಟ್ಟು ಕೆಲಸ ಕೇಳುವವರಿಗೆ ಕೆಲಸ ನೀಡಿ ಎಂದು ಹೇಳಿದರು. ಮೆಸ್ಕಾಂ ಮತ್ತು ಪಂಚಾಯಿತಿ ನಡುವಿನ ವಿದ್ಯುತ್ ಬಿಲ್ ಸಮಸ್ಯೆಯನ್ನು ಪರಸ್ಪರ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದ ಅವರು, ಭತ್ತದ ಬೆಳೆ ಪ್ರಗತಿ ಪರಿಶೀಲಿಸಿ ಸಲಹೆಗಳನ್ನು ನೀಡಿದರು.
ಮಳೆಹಾನಿ ಕಾಮಗಾರಿ ಪ್ರಗತಿಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗ ಎರಡು ದಿನಗಳೊಳಗಾಗಿ ಸಲ್ಲಿಸಬೇಕೆಂದ ಅವರು, ಜಾಗೃತಿ ಸಮಿತಿ ಸದಸ್ಯರಾದ ರಾಜೀವ್ ಶೆಟ್ಟಿ ಮತ್ತು ಗುಣವತಿ ಅವರ ಸಮಸ್ಯೆಗಳನ್ನು ಆಲಿಸಿ ಸಲಹೆ ನೀಡಿದರು.
ಜಿಲ್ಲೆಯಲ್ಲಿ ರಸ್ತೆಗಳು ತೀರಾ ಹದಗೆಟ್ಟಿದ್ದು ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ರಸ್ತೆಗಳನ್ನು ಸುಸ್ಥಿತಿಗೆ ತರಲು ಸಮರೋಪಾದಿಯಲ್ಲಿ ಕ್ರಮಕೈಗೊಳ್ಳಬೇಕೆಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 34 ಸಾವಿರ ಹೆಕ್ಟೇರ್ ಮುಂಗಾರು ಹಂಗಾಮಿಗೆ ಭತ್ತ ಬೆಳೆಯಲು ಗುರಿ ನಿಗದಿಯಾಗಿದ್ದು, 32,423 ಹೆಕ್ಟೇರ್ ಗುರಿ ಸಾಧಿಸಲಾಗಿದೆ. 541 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದೆ. 31 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಭಟ್, ಉಪಾಧ್ಯಕ್ಷರಾದ ಧನಲಕ್ಷ್ಮಿ ಜನಾರ್ಧನ್, ಉಪಕಾರ್ಯದರ್ಶಿ ಶಿವರಾಮೇಗೌಡ, ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ, ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ಉಪಸ್ಥಿತರಿದ್ದರು.