ಮಂಗಳೂರು,ಅಕ್ಟೋಬರ್.25 : ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಅವಳಿ ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತು ಮುಖ್ಯ ಅಧಿಕಾರಿಗಳ ಸಭೆ ನಡೆಸಿದ ಸನ್ಮಾನ್ಯ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ ಅವರು, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಮಯಮಿತಿಯನ್ನು ನಿಗದಿಪಡಿಸಿದರು.ಇಂದು ನಗರದ ಸರ್ಕಿಟ್ ಹೌಸ್ ನಲ್ಲಿ ಸಭೆ ನಡೆಸಿದ ಅವರು, ರಸ್ತೆ, ವಿದ್ಯುತ್ ಮತ್ತು ಕುಡಿಯುವ ನೀರಿನ ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಭೆಯ ಬಳಿಕ ಪತ್ರಕರ್ತರಿಗೆ ತಿಳಿಸಿದರು.
ಮಾಣಿ - ಸಂಪಾಜೆ ರಸ್ತೆ ಕಾಮಗಾರಿ ಮುಗಿಸಲು ಸಮಯಮಿತಿ. ರಾಷ್ಟ್ರೀಯ ಹೆದ್ದಾರಿ ಅದರಲ್ಲೂ ಮುಖ್ಯವಾಗಿ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ರಸ್ತೆ ದುರಸ್ತಿಗೆ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು. ಡಿಸೆಂಬರ್ ಅಂತ್ಯದೊಳಗೆ ಜಿಲ್ಲೆಯ ಎಲ್ಲ ರಸ್ತೆಗಳು ಹೊಂಡ ಮುಕ್ತವಾಗಿರಬೇಕೆಂದ ಅವರು, ಫೆಬ್ರವರಿ- ಮಾರ್ಚ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಯಾಗಬಾರದು ಎಂದರು.
ಸುಳ್ಯಕ್ಕೆ 110 ಕೆ ವಿ ವಿದ್ಯುತ್ ಸಬ್ ಸ್ಟೇಷನ್ ಸ್ಥಾಪಿಸಲು ಸಮೀಕ್ಷಾ ಕಾರ್ಯ ನಡೆಸಲಾಗಿದೆ ಎಂದರು. ಉಡುಪಿ ಜಿಲ್ಲಾ ಸ್ಪತ್ರೆ ಉನ್ನತೀಕರಣಕ್ಕೆ, ಆರೋಗ್ಯ ಸೇವೆಯನ್ನು ಇನ್ನಷ್ಟು ಬಲಪಡಿಸಲು ಅನುದಾನ ಸಾಕಷ್ಟು ನೀಡಲಾಗುವುದು; ಅನುಷ್ಠಾನ ಸ್ಥಳೀಯಾಧಿಕಾರಿಗಳ ಹೊಣೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಆಡಳಿತ ಚುರುಕುಗೊಳಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನ ಬಿಟ್ಟು ಕೆಳಗಿನ ಹಂತಗಳಲ್ಲಿ ಖುದ್ದಾಗಿ ಹೋಗಿ ಪ್ರಗತಿ ಪರಿಶೀಲನೆ ನಡೆಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಡಿಸೆಂಬರ್ ಅಂತ್ಯದೊಳಗೆ ತಾಲೂಕು ಕಚೇರಿಗಳಲ್ಲಿ ಸಾಮಾನ್ಯ ಜನರ ಕಡತ ಉಳಿಯದಂತೆ ಜಿಲ್ಲಾಧಿಕಾರಿಗಳು ಖುದ್ದು ಪರಿಶೀಲನೆ ನಡೆಸಬೇಕೆಂದ ಮುಖ್ಯಮಂತ್ರಿಗಳು, ಶಿಕ್ಷಣ ಹಾಗೂ ಶಿಕ್ಷಕರ ಸಮಸ್ಯೆಗಳ ಬಗ್ಗೆ ನವೆಂಬರ್ 3ರಂದು ರಾಜ್ಯ ಮಟ್ಟದಲ್ಲಿ ಸಮಗ್ರ ಸಭೆ ನಡೆಸುವುದಾಗಿ ಹೇಳಿದರು.
ಅಂಗನವಾಡಿ ಮಕ್ಕಳಿಗೆ ಸ್ಥಳೀಯ ಆಹಾರ ಪೂರೈಕೆ, ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಅನುದಾನ ಬಿಡುಗಡೆ ಮಾಡುವುದಾಗಿ ನುಡಿದರು.
ಮಂಗಳೂರು ಮಹಾನಗರಪಾಲಿಕೆ ತ್ವರಿತ ಅಭಿವೃದ್ಧಿಗೆ ನಗರದ ಒಳರಸ್ತೆಗೆ ಅನುದಾನ ನೀಡಲು ನಗರೋತ್ಥಾನ ಯೋಜನೆಯಡಿ 20 ದಿನಗಳೊಳಗೆ ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದರು. ಸಾಮಾಜಿಕ ಸುರಕ್ಷಾ ಯೋಜನೆಗಳ ವೆರಿಫಿಕೇಷನ್ ಕಾರ್ಯ ಮುಗಿದಿದ್ದು ಅಗತ್ಯ ಹಣವನ್ನು ತಕ್ಷಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದರು. ಅವಿಭಜಿತ ಜಿಲ್ಲೆಗಳ ಉಸ್ತುವಾರಿ ಸಚಿವರುಗಳಾದ ಕಷ್ಣ ಜೆ.ಪಾಲೇಮಾರ್,ಡಾ.ವಿ.ಎಸ್.ಆಚಾರ್ಯ, ವಿಧಾನ ಸಭಾ ಉಪಸಭಾಪತಿಗಳಾದ ಎನ್.ಯೋಗಿಶ್ ಭಟ್, ಶಾಸಕರುಗಳಾದ ಅಂಗಾರ, ಮಲ್ಲಿಕಾ ಪ್ರಸಾದ್, ರಘುಪತಿ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಭಟ್, ಮೇಯರ್ ಪ್ರವೀಣ್, ಜಿಲ್ಲಾಧಿಕಾರಿ ಡಾ.ಎನ್ ಎಸ್ ಚನ್ನಪ್ಪ ಗೌಡ, ಸಿಇಒ ಡಾ. ವಿಜಯ ಪ್ರಕಾಶ್, ಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್, ಮತ್ತಿತರ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.