Saturday, October 22, 2011
ರಾಜ್ಯೋತ್ಸವ ಪೂರ್ವಭಾವಿ ಸಭೆ
ಮಂಗಳೂರು,ಅಕ್ಟೋಬರ್.22:ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ಜಿಲ್ಲಾಧಿಕಾರಿ ಡಾ ಎನ್ ಎಸ್ ಚೆನ್ನಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅ. 21 ರಂದು ಅಧಿಕಾರಿಗಳ ಸಭೆ ನಡೆಯಿತು.ರಾಜ್ಯೋತ್ಸವ ಮೆರವಣಿಗೆಯನ್ನು ಆಕರ್ಷಕವಾಗಿ ಹಾಗೂ ಅದ್ದೂರಿಯಾಗಿ ನಡೆಸಲು ಜಿಲ್ಲಾಧಿಕಾರಿಗಳು ಉಪಸಮಿತಿಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿವಿಧ ಇಲಾಖೆಗಳಿಂದ ಕನಿಷ್ಠ ಎಂಟು ಟ್ಯಾಬ್ಲೊಗಳು ಹಾಗೂ ಒಂದು ಸಾವಿರ ಮಕ್ಕಳು ಬೆಳಗ್ಗಿನ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 7.45 ಕ್ಕೆ ಮೆರವಣಿಗೆ ಜ್ಯೋತಿ ವೃತ್ತದಿಂದ ಆರಂಭಗೊಳ್ಳಲಿದೆ. ಮೈದಾನವನ್ನು ಸಿಂಗರಿಸಲು ಮಹಾನಗರಪಾಲಿಕೆಯವರಿಗೆ ಹಾಗೂ ಮಕ್ಕಳಿಗೆ ಉಪಹಾರ ಹಾಗೂ ಸಿಹಿತಿಂಡಿ ವಿತರಿಸಲು ವಿದ್ಯಾಂಗ ಉಪನಿರ್ದೇಶಕರಿಗೆ ಸೂಚನೆ ನೀಡಿದರು. ಸಮಾರಂಭದಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆಯನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿದ್ದಾರೆ. ಸಮಾರಂಭ ಸುವ್ಯವಸ್ಥಿತವಾಗಿ ಹಾಗೂ ಸಮರ್ಪಕವಾಗಿ ನಡೆಸಲು ವಿವಿಧ ಅಧಿಕಾರಿಗಳಿಗೆ ಹೊಣೆಗಾರಿಕೆಯನ್ನು ವಹಿಸಲಾಗಿದೆ. ಮೈದಾನದಲ್ಲಿ ಮಕ್ಕಳ ಕಾರ್ಯಕ್ರಮ ಹಾಗೂ ಅಪರಾಹ್ನ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಪೂರ್ವತಯಾರಿ ಎಲ್ಲವನ್ನೂ ಜಿಲ್ಲಾಧಿಕಾರಿಗಳು ಖುದ್ದಾಗಿ ವೀಕ್ಷಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ, ಸಹಾಯಕ ಆಯುಕ್ತರಾದ ಡಾ.ವೆಂಕಟೇಶ್ ಅವರನ್ನೊಳಗೊಂಡಂತೆ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.