ಮಂಗಳೂರು,ಅಕ್ಟೋಬರ್.10: ಬಾಲ ಕಾರ್ಮಿಕ ಕಾಯ್ದೆ ಕಲಂ 17 ರಡಿಯಲ್ಲಿ ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದ ಪ್ರಕಾರ ಈ ಸಾಲಿನ ಎಪ್ರಿಲ್ 11 ರ ಅಂತ್ಯದ ವರೆಗೆ 6 ಪ್ರಕರಣಗಳನ್ನು ದಾಖಲು ಪಡಿಸಿ ನೇಮಿಸಿಕೊಂಡಿದ್ದ ಮಾಲಕರಿಂದ ತಲಾ 20000 ರೂ.ದಂಡ ವಸೂಲಿ ಮಾಡಲಾಗಿದೆಯೆಂದು ಮಂಗಳೂರು ಜಿಲ್ಲಾ ಸಹಾಯಕ ಕಾರ್ಮಿಕ ಆಯುಕ್ತರಾದ ವೆಂಕಟೇಶ ಎ.ಶಿಂದೆಹಟ್ಟಿ ತಿಳಿಸಿದರು.ಅವರು ಇಂದು ಡಿಸ್ಟ್ರಿಕ್ಟ್ ಚೈಲ್ಡ್ ಲೇಬರ್ ಪ್ರಾಜೆಕ್ಟ್ ಸೊಸೈಟಿ ಮಂಗಳೂರು ಇವರ ವತಿಯಿಂದ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.ಮನೆಗಳಲ್ಲಿ ಉದ್ದಿಮೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದುಡಿಸುವುದು ಅಥವಾ ನೇಮಿಸಿಕೊಳ್ಳುವುದು ಅಪರಾಧ.ಈ ಬಗ್ಗೆ 18 ಶಾಲಾ ಮುಖ್ಯಸ್ಥರು ದೃಢೀಕರಣ ನೀಡಿ ಘೋಷಣಾ ಪತ್ರವನ್ನು ಇಲಾಖೆಗೆ ನೀಡಿರುತ್ತಾರೆ.ಮಕ್ಕಳ ಚಲನವಲನ ಮತ್ತು ಕೆಲಸದಲ್ಲಿ ಮಕ್ಕಳ ನೇಮಕಾತಿ ಬಗ್ಗೆ ಮಾಹಿತಿ ನೀಡಲು ಪ್ರತಿ ಗ್ರಾಮ ಪಂಚಾಯತ್ ಗೆ ಒಬ್ಬರಂತೆ ಮಕ್ಕಳ ಮಿತ್ರರನ್ನು ನೇಮಕ ಮಾಡುವ ಸಂಬಂಧ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆಯವರಿಗೆ ಸೂಚನೆ ನೀಡಲಾಯಿತು.ಮಕ್ಕಳ ಮಿತ್ರರ ಜವಾಬ್ದಾರಿಯನ್ನು ಆಯಾ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ವಹಿಸಿಕೊಡಲಾಗಿದೆ. ಬಾಲಕಾರ್ಮಿಕ ಯೋಜನಾ ಸಂಘದ ಕಚೇರಿಗೆ ಸ್ಥಳಾವಕಾಶಒದಗಿಸಲಾಗಿದ್ದು,ವಾಮಂಜೂರು ಬಳಿ ಇರುವ ಕಟ್ಟಡವನ್ನು ಪರಿಶೀಲಿಸುವಂತೆ ಸೂಚಿಸಲಾಯಿತು.
ಈ ಸಂಘಕ್ಕೆ 3 ಹುದ್ದೆಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ. ಸಭೆಯಲ್ಲಿ ಡಿಸ್ಟ್ರಿಕ್ಟ್ ಲೇಬರ್ ಪ್ರಾಜೆಕ್ಟ್ ಸೊಸೈಟಿಯ ಯೋಜನಾ ನಿರ್ದೇಶಕರಾದ ಎಂ.ಆನಂದಮೂರ್ತಿ ಸಭೆಗೆ ವಿವರಗಳನ್ನು ನೀಡಿದರು. ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಚ್. ಪಿ ಜ್ಞಾನೇಶ್ ವಂದಿಸಿದರು.ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.