Friday, June 14, 2013

ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಜುಲೈ ಅಂತ್ಯಕ್ಕೆ ಚಾಲನೆ

ಮಂಗಳೂರು, ಜೂನ್. 14:ಕಿನ್ನಿಗೋಳಿ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗಳು ಅಂತಿಮ ಹಂತ ತಲುಪಿದ್ದು, ವಿದ್ಯುತ್ ಹಾಗೂ ಪೈಪ್ ಲೈನ್ ಅಳವಡಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು,ಜುಲೈ ಅಂತ್ಯಕ್ಕೆ ನೀರು ಸರಬರಾಜು ಯೋಜನೆಗೆ ಚಾಲನೆ ಮಾಡಬಹುದಾಗಿದೆಯೆಂದು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಸತ್ಯನಾರಾಯಣ ಅವರು ಗುರುವಾರ  ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಜಿಲ್ಲೆಗೆ 2013-14ನೇ ಸಾಲಿಗೆ ಕುಡಿಯುವ ನೀರು ಪೂರೈಕೆಗಾಗಿ 46.24 ಕೋಟಿ ಮಂಜೂರಾತಿ ದೊರೆತಿದ್ದು, ಕಳೆದ ವರ್ಷದ ಬಾಕಿ ಇರುವ ಕುಡಿಯುವ ನೀರು ಯೋಜನೆಯಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲಾಗುವುದೆಂದು ಹಾಗೂ ಜಿಲ್ಲೆಯಲ್ಲಿ ಕೈಗೊಂಡಿರುವ ಬಹುಗ್ರಾಮಕುಡಿಯುವ ನೀರು ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕೆಲವು ಯೋಜನೆಗಳ ಟೆಂಡರ್ ಪ್ರಕ್ರಿಯೆಯಲ್ಲಿ ಇರುವುದಾಗಿ ಅವರು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ದಿನೇದಿನೇ ಹೆಚ್ಚುತ್ತಿರುವುದರಿಂದ ಅದನ್ನು ತಡೆಗಟ್ಟಲು ಎಲ್ಲಾ ಗ್ರಾಮ ಪಂಚಾಯತ್ ಗಳು ಹಾಗೂ ಪಟ್ಟಣ ಪಂಚಾಯತ್ ಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು.ಈ ದಿಸೆಯಲ್ಲಿ ತಮ್ಮ ತಮ್ಮ ವ್ಯಾಪ್ತಿಯ ಹೋಟೇಲ್ ವಿದ್ಯಾಥರ್ಿನಿಲಯಗಳು ಮುಂತಾದ ಕಡೆ ಶುಚಿತ್ವವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರಿಗೆ ನೋಟೀಸು ಕೊಡುವ ಮೂಲಕ ಅವರಲ್ಲಿ ಜಾಗೃತಿ ಉಂಟುಮಾಡಬೇಕು. ಹಾಗೂ ಸ್ವಚ್ಚತೆಗೆ ನಿರ್ಲಕ್ಷ್ಯ ತಾಳುವ ಹೋಟೇಲ್ ಗಳ ವಿರುದ್ಧ ಕ್ರಮ ಕೈಗೊಂಡು ಅಂತಹ ಹೋಟೇಲ್ ಗಳನ್ನು ಮುಚ್ಚುವಂತೆ ಗ್ರಾಮ ಪಂಚಾಯತ್ಗಳು ಕಾರ್ಯೋನ್ಮುಖರಾಗಬೇಕೆಂದು ಮುಖ್ಯ ಕಾರ್ಯ ನಿರ್ವಹಣಾದಿಕಾರಿ ಕೆ.ಎನ್.ವಿಜಯಪ್ರಕಾಶ್ ಸಭೆಯಲ್ಲಿ ಹಾಜರಿದ್ದ ತಾಲೂಕು ಪಂಚಾಯತ್ಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ವಾಜಪೇಯಿ ಆರೋಗ್ಯ ವಿಮೆ ಯೋಜನೆಯಡಿಯಲ್ಲಿ 422 ವಿವಿಧ ಕಾಯಿಲೆಗಳಿಗೆ ನಗರದ ಫಾದರ್ ಮುಲ್ಲರ್ಸ್ ಕ್ಷೇಮ್,ಯೇನೋಪಯ,ಸ್ಪೆಷಲ್ ಹಾಸ್ಟಿಟಲ್ ಹಾಗೂ ಎಜೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಫಲಾನುಭವಿಗಳು ಇದರ ಉಪಯೋಗವನ್ನು ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಒ.ಶ್ರೀರಂಗಪ್ಪ ತಿಳಿಸಿದರು.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ನಡಿಯಲ್ಲಿ ಜಿಲ್ಲೆಗೆ 100942899 ರೂ.ಗಳು ಮಂಜೂರಾಗಿದ್ದು ಇದರಲ್ಲಿ 86800671 ರೂ.ಗಳು ವೆಚ್ಚವಾಗಿದ್ದು, ಉಳಿಕೆ ಮೊತ್ತ 11985147 ಗಳನ್ನು ಸರ್ಕಾರಕ್ಕೆ ಹಿಂತಿರುಗಿಸಲಾಗಿದೆಯೆಂದು ಆರ್.ಸಿ.ಹೆಚ್ ಜಿಲ್ಲಾ ಅಧಿಕಾರಿ ಡಾ. ರುಕ್ಮಿಣಿಯವರು ಜಿಲ್ಲಾ ಪಂಚಾಯತ್ ಸಭೆಗೆ ಮಾಹಿತಿ ನೀಡಿದರು.