Wednesday, June 12, 2013

ಬಾಲಕಾರ್ಮಿಕರ ಪುನರ್ವಸತಿಯು ಮುಖ್ಯ: ಚೌಡಪುರ್ಕರ್ ಅರುಣ್


ಮಂಗಳೂರು, ಜೂನ್. 12: ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ನಿಷೇಧಕ್ಕೆ ಎಲ್ಲರೂ ಅಸ್ಥೆ ವಹಿಸಬೇಕು.  ಬಾಲಕಾರ್ಮಿಕರ ಪುನರ್ವಸತಿಗೆ ಪರಿಣಾಮಕಾರಿಯಾಗಿ ಯೋಜನೆ ರೂಪಿಸಬೇಕೆಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ  ಚೌಡಪುರ್ಕರ್ ಅರುಣ್ ಅವರು ಹೇಳಿದರು.
        ಅವರು ಇಂದು ನಗರದ ಪುರಭವನದಲ್ಲಿ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಬಾಲ ಕಾಮರ್ಿಕ ಯೋಜನಾ ಸಂಘ ದಕ್ಷಿಣಕನ್ನಡ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಮತ್ತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
           ಬಡತನ ,ಅನಕ್ಷರತೆ,ಅತೀ ಸಂತಾನ ಇವೇ ಮೊದಲಾದ ಕಾರಣಗಳಿಂದ ಸಂಸಾರದ ಬಂಡಿ ಸಾಗಲು ತಮ್ಮ ಎಳೆ ಮಕ್ಕಳನ್ನು ಕೂಲಿಗಾಗಿ ಬಾಲಕಾರ್ಮಿಕರನ್ನಾಗಿಸಲಾಗುತ್ತಿದೆ ಎಂದ ಅವರು, ಪೋಷಕರ ಆರ್ಥಿಕತೆ ಸುಧಾರಿಸುವ ಹಾಗೂ ಅವರು ಆರ್ಥಿಕವಾಗಿ ಮುಂದೆ ಬರುವಂತಹ ಕಾರ್ಯಕ್ರಮಗಳತ್ತ  ಅವರನ್ನು ಆಕರ್ಷಿಸುವ ಮೂಲಕ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯವಾಗಲಿದೆ ಎಂದರು.
         ಸಮಾರಂಭದ ಅಂಗವಾಗಿ ಬೆಳಿಗ್ಗೆ ಜ್ಯೋತಿ ವೃತ್ತದಿಂದ ಪುರಭವನದ ವರೆಗೆ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿಗಳ ಜಾಥಾವನ್ನು ಉದ್ಘಾಟಿಸಿ, ನಂತರ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ನೆರೆದಿದ್ದ ಸಭಿಕರಿಗೆ ಬಾಲ ಕಾರ್ಮಿಕ ಪದ್ಧತಿ ನಿಷೇಧಿಸುವ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಅವರು ಮಾತನಾಡಿ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಅತ್ಯಂತ ಕನಿಷ್ಠವಾಗಿದ್ದು ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಇಲಾಖಾ ಜಿಲ್ಲಾ ಮಟ್ಟದ ಅಧಿಕಾರಿಗಳು ಬಡತನ ನಿರ್ಮೂಲನಾ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಕರೆ ನೀಡಿದರು.
        ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶ್ರೀಮತಿ ಆಶಾ ನಾಯಕ್ ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಕ್ಕಳ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಆದ್ದರಿಂದ ಸಾರ್ವಜನಿಕರು ಎಲ್ಲಿಯೇ ಆಗಲೀ ಬಾಲ ಕಾಮರ್ಿಕರನ್ನು ಕಂಡಲ್ಲಿ ಚೈಲ್ಡ್ ಲೈನ್ ಗೆ  ತಿಳಿಸುವಂತೆ ಮನವಿ ಮಾಡಿದರು.
            ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕುವ ದಿಸೆಯಲ್ಲಿ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ  ಸಹಕರಿಸುವಂತೆ ಹಾಗೂ ನೇರವಾಗಿ ತಮ್ಮನ್ನು ದೂರವಾಣಿ ಮೂಲಕವೂ ಸಂಪರ್ಕಿಸಲು ವಿನಂತಿಸಿದರು.
           ಪ್ರಾಸ್ತಾವಿಕವಾಗಿ ಮಾತನಾಡಿ ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ ನಾಗೇಶ್ ಅವರು ದೇಶದಲ್ಲಿ 14 ವರ್ಷಕ್ಕಿಂತ ಕಿರಿಯ ಬಾಲ ಕಾರ್ಮಿಕರ ಸಂಖ್ಯೆ 2 ಕೋಟಿ,ರಾಜ್ಯದಲ್ಲಿ 8.5 ಲಕ್ಷ ಇದ್ದು ಶೇಕಡಾ 90 ಗ್ರಾಮೀಣ ಪ್ರದೇಶದಲ್ಲಿ ಹಾಗೂ ಶೇಕಡಾ 10 ರಷ್ಟು ಪಟ್ಟಣ/ನಗರ ಪ್ರದೇಶಗಳಲ್ಲಿದ್ದಾರೆ. ಶೇಕಡಾ 45 ರಷ್ಟು ಹೆಣ್ಣು ಶೇಕಡಾ 55 ರಷ್ಟು ಗಂಡು ಮಕ್ಕಳಿದ್ದಾರೆ ಎಂದು ಅಂಕಿ ಅಂಶ ನೀಡಿದರು.ಬಾಲಕಾರ್ಮಿಕರಾಗಿ ಶೋಷಣೆಗೊಳಪಟ್ಟು ಅಲ್ಲಿಂದ ತಪ್ಪಿಸಿಕೊಂಡು ಪೋಲೀಸರ ಸಹಾಯದಿಂದ ಸ್ವಯಂ ಸೇವಾ ಸಂಸ್ಥೆ ಸೇರಿ ಎಸ್ ಎಸ್ ಎಲ್ ಸಿ ಯಲ್ಲಿ 376 ಅಂಕ ಗಳಿಸಿರುವ ಚಿತ್ರದುರ್ಗ ಮೂಲದ ಕು.ಗೀತಾ ತನ್ನ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು.
            ಸಮಾರಂಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ  ಜೆ.ಎನ್.ಸುಬ್ರಹ್ಮಣ್ಯ, ವಕೀಲರ ಸಂಘದ ಅಧ್ಯಕ್ಷರಾದ ಅಶೋಕ ಅರಿಗ, ಮಹಾನಗರಪಾಲಿಕೆಯ ಪ್ರಭಾರ ಆಯುಕ್ತ ಶ್ರೀಕಾಂತ ರಾವ್, ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮೋಸೆಸ್ ಜಯಶೇಖರ್, ಮಹಿಳಾ ಮಕ್ಕಳ ಆಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಶಕುಂತಳಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅರುಣ್ ಫುರ್ಟಾಡೋ, ಕಾರ್ಖಾನೆ ಮತ್ತು ಬಾಯ್ಲರು ಇಲಾಖೆ ಉಪ ನಿರ್ದೆಶಕರಾದ ನಂಜಪ್ಪ ಮುಂತಾದವರು ಉಪಸ್ಥಿತರಿದ್ದರು.