ಮಂಗಳೂರು ಫೆಬ್ರವರಿ 22: ಮಂಗಳೂರು ವಿಶ್ವವಿದ್ಯಾನಿಲಯದ 31ನೇ ಘಟಿಕೋತ್ಸವ ಫೆ.23ರಂದು ಸಂಪನ್ನಗೊಳ್ಳಲಿದ್ದು; ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿಗಳಾದ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ ತಿಳಿಸಿದ್ದಾರೆ.
ಗುರುವಾರ ನಗರದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡೆ ಮತ್ತು ಸಮಾಜ ಸೇವೆಗಾಗಿ ಎ.ಬಿ.ಸುಬ್ಬಯ್ಯ, ಕಲೆ-ಸಂಗೀತ ಕ್ಷೇತ್ರದ ಸಾಧನೆಗಾಗಿ ಡಾ.ಕದ್ರಿ ಗೋಪಾಲನಾಥ್ ಮತ್ತು ಸಾಹಿತ್ಯ-ಸಂಗೀತ ಮತ್ತು ಜಾನಪದ ಕ್ಷೇತ್ರದ ಸಾಧನೆಗಾಗಿ ಡಾ.ಚಂದ್ರಶೇಖರ್ ಕಂಬಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುವುದು ಎಂದರು.
ರಾಜ್ಯಪಾಲರು ಮತ್ತು ವಿಶ್ವವಿದ್ಯಾನಿಲಯದ ಕುಲಾಪತಿಗಳಾದ ಎಚ್.ಆರ್.ಭಾರದ್ವಾಜ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸುವರು. ಸಹಕುಲಾಧಿಪತಿ ಮತ್ತು ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಸಿ.ಟಿ.ರವಿ ಉಪಸ್ಥಿತರಿರುತ್ತಾರೆ. ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಟಿ.ರಾಮಸ್ವಾಮಿ ಘಟಿಕೋತ್ಸವ ಭಾಷಣ ಮಾಡುವರು ಎಂದು ಕುಲಪತಿ ವಿವರಿಸಿದರು.
ಘಟಿಕೋತ್ಸವದಲ್ಲಿ 84 ಮಂದಿಗೆ ಡಾಕ್ಟರೇಟ್ ಪದವಿ ನೀಡಲಾಗುವುದು. ಕಲಾ ವಿಭಾಗದ 15 ಮಂದಿ, ವಿಜ್ಞಾನ ವಿಭಾಗದ 59 ಮಂದಿ, ವಾಣಿಜ್ಯ ವಿಭಾಗದ 8 ಮಂದಿ ಮತ್ತು ಶಿಕ್ಷಣ ವಿಭಾಗ ಇಬ್ಬರು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ. 7 ಮಂದಿಗೆ ಎಂ.ಫಿಲ್ ಪದವಿ ನೀಡಲಾಗುವುದು. ಇದೇ ವೇಳೆ 36 ಮಂದಿಗೆ ಚಿನ್ನದ ಪದಕ, 55 ಮಂದಿಗೆ ನಗದು ಬಹುಮಾನ ನೀಡಲಾಗುವುದು ಎಂದು ಪೊ.ಮೂರ್ತಿ ನುಡಿದರು.
ಸ್ನಾತಕೋತ್ತರ ಪದವಿಯಲ್ಲಿ 44 ಮಂದಿಗೆ, ಪದವಿಯಲ್ಲಿ 16 ಮಂದಿಗೆ, ಕಲೆಯಲ್ಲಿ 12 ಮಂದಿಗೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 30 ಮಂದಿಗೆ, ವಾಣಿಜ್ಯ ವಿಭಾಗದಲ್ಲಿ 10 ಮಂದಿಗೆ, ಕಾನೂನು ಶಿಕ್ಷಣದಲ್ಲಿ ಒಬ್ಬರಿಗೆ, ಶಿಕ್ಷಣದಲ್ಲಿ ನಾಲ್ವರಿಗೆ ಮತ್ತು ಸ್ನಾತಕೋತ್ತರ ಡಿಪ್ಲೊಮಾದಲ್ಲಿ ಮೂವರಿಗೆ ಹೀಗೆ ಒಟ್ಟು 60 ರ್ಯಾಂಕುಗಳನ್ನು ಘಟಿಕೋತ್ಸವದಲ್ಲಿ ನೀಡಲಾಗುವುದು ಎಂದು ಕುಲಪತಿಗಳು ಹೇಳಿದರು.
2011-12 ನೇ ಸಾಲಿನಲ್ಲಿ ಪರೀಕ್ಷೆ ಬರೆದು ಉತ್ತೀರ್ಣ ರಾದ 18,969 ವಿದ್ಯಾ ರ್ಥಿಗಳ ಪೈಕಿ 1,406 (ಶೇ.7.41) ಮಂದಿ (425 ಸ್ನಾತ ಕೋತ್ತರ ಪದ ವೀಧರರು, 895 ಪದ ವೀಧರರು), ಡಾಕ್ಟರೇಟ್ ಪದ ವೀಧರರು 82 ಮಂದಿ, ನಾಲ್ವರು ಎಂ.ಫಿಲ್ ಪದವೀಧರರು ಸ್ವಯಂ ಹಾಜರಾಗಿ ತಮ್ಮ ಪದವಿಯನ್ನು ಸ್ವೀಕರಿಸಲಿರುವರು ಎಂದು ಪ್ರೊ.ಶಿವಶಂಕರ ಮೂರ್ತಿ ಹೇಳಿದರು.
ಎ.ಬಿ.ಸುಬ್ಬಯ್ಯ ಅವರು ಮೂಲತ: ಕೊಡಗು ಜಿಲ್ಲೆಯ ಮಡಿಕೇರಿಯವರು. ಬೆಂಗಳೂರಿನ ಸೈಂಟ್ ಜೋಸೆಫ್ ಕಲಾ ಮತ್ತು ವಿಜ್ಞಾನ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಪ್ರಸ್ತುತ ಕರ್ನಾಟಕ ಹಾಕಿ ಫೆಡರೇಶನ್ನ ಕಾರ್ಯದರ್ಶಿಯಾಗಿ ಸುಬ್ಬಯ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅನೇಕ ಹಾಕಿ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಇವರ ಶ್ರಮವಿದೆ.
ಎ.ಬಿ.ಸುಬ್ಬಯ 1197ರಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕೃತರು. 2003ರಲ್ಲಿ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಸತತ 11 ವರ್ಷಗಳ ಕಾಲ ಭಾರತದ ಹಾಕಿ ತಂಡದಲ್ಲಿ ವಿರಾಜಮಾನರಾದ ಸುಬ್ಬಯ್ಯ 285 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಹೆಗ್ಗಳಿಕೆ ಹೊಂದಿದ್ದಾರೆ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಮೊದಲಾದ ಪ್ರತಿಷ್ಠಿತ ಪಂದ್ಯಗಳಲ್ಲಿ ಆಡಿ ಪದಕ ವಿಜೇತರಾಗಿರುವರು.
ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳಿಗೆ ಕೋಚ್ ಆಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಉತ್ತಮ ಹಾಕಿ ವೀಕ್ಷಕ ವಿವರಣೆಗಾರರಾದ ಸುಬ್ಬಯ್ಯ 1986-87ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಹಾಕಿ ತಂಡದ ನಾಯಕರಾಗಿದ್ದರು.
ಕದ್ರಿ ಗೋಪಾಲನಾಥ್ ಮಂಗಳೂರಿನಲ್ಲಿ 1949ರಲ್ಲಿ ಜನಿಸಿದರು. ಭಾರತದ ಸಂಗೀತ ಸಾಮ್ರಾಜ್ಯದ ದೊರೆ. ಕರ್ನಾಟಕ ಸಂಗೀತವನ್ನು ಸ್ಯಾಕ್ಸೋಫೋನ್ ಮೂಲಕ ವಿಶ್ವ ಮಟ್ಟಕ್ಕೇರಿಸಿದವರು.
2004ರಲ್ಲಿ ಭಾರತ ಸರಕಾರದ ಪದ್ಮಶ್ರೀ ಪುರಸ್ಕಾರ ಪಡೆದ ಕದ್ರಿಯವರು ಅದೇ ವರ್ಷ ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾದವರು. 1998ರಲ್ಲಿ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. 1994ರಲ್ಲಿ ಲಂಡನ್ನಲ್ಲಿ ಬಿಬಿಸಿಗಾಗಿ ಸಂಗೀತ ಕಛೇರಿ ನಡೆಸಿದ್ದಾರೆ. ಕರ್ಣಾಟಕ ಸಂಗೀತಕ್ಕಾಗಿ ಬಿಬಿಸಿಯಿಂದ ಆಮಂತ್ರಣ ಪಡೆದ ಮೊದಲ ಕಣರ್ಾಟಕ ಸಂಗೀತದ ಕಲಾವಿದರಾಗಿದ್ದಾರೆ ಕದ್ರಿ ಗೋಪಾಲನಾಥ್.
ಸಾಕ್ಸೋಫೋನ್ ಚಕ್ರವರ್ತಿ, ಸಾಕ್ಸೋಪೋನ್ ಸಾಮ್ರಾಟ, ಕರ್ನಾಟಕ ಕಲಾಶ್ರೀ, ನಾದೋಪಾಸನ ಬ್ರಹ್ಮ ,ನಾದ ಕಲಾನಿ ಮೊದಲಾದ ಬಿರುದುಗಳಿಂದ ಅಲಂಕೃತರಾದ ಕದ್ರಿಯವರು ತಮಿಳ್ನಾಡು ಸರಕಾರದಿಂದ `ಕಲೈಮಾಮಣಿ' ಪ್ರಶಸ್ತಿ ಪುರಸ್ಕೃತರು. ಕಂಚಿ ಕಾಮಕೋಟಿ, ಶೃಂಗೇರಿ ಮತ್ತು ಅಹೋಬಿಲ ಮಠದ ಆಸ್ಥಾನ ವಿದ್ವಾಂಸರಾಗಿ ಗೌರವಿಸಲ್ಪಟ್ಟ ಮೇರು ಕಲಾವಿದರಾಗಿದ್ದಾರೆ. ಅನೇಕ ಅಂತಾರಾಷ್ಟ್ರೀಯ ಸಂಗೀತ ಉತ್ಸವಗಳಲ್ಲಿ ಭಾಗವಹಿಸಿ ಭಾರತದ ಕೀರ್ತಿಯನ್ನು ಎತ್ತರಕ್ಕೇರಿಸಿರುವ ಗೋಪಾಲನಾಥ್ ಅವರು ಧ್ವನಿ ಸುರುಳಿಗಳ ಮೂಲಕ ದೇಶದ ಸಂಗೀತಾಸಕ್ತರಲ್ಲಿ ಮನೆ ಮಾತಾಗಿದ್ದಾರೆ.
ಡಾ.ಚಂದ್ರಶೇಖರ ಕಂಬಾರ 2011ರ ಜ್ಞಾನಪೀಠ ಪ್ರಶಸ್ತಿ ಪಡೆದವರು. 2001ರಲ್ಲಿ ಪದ್ಮಶ್ರೀ, 1988ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರ ಬೆಳಗಾಂ ಜಿಲ್ಲೆಯ ಘೋದಗೇರಿಯವರು. ಜನನ 1937ರಲ್ಲಿ. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಪ್ರತಿಭಾವಂತರಾದ ಕಂಬಾರ ಚಿಕ್ಕ ಅವಗೆ ಚಿಕಾಗೋದಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ.
ಸುಮಾರು ಎರಡು ದಶಕಗಳ ಕಾಲ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ ಡಾ.ಕಂಬಾರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸ್ಥಾಪಕ ಕುಲಪತಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷರಾಗಿ, ಕನರ್ಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕೆಲಸ ಮಾಡಿರುವ ಕಂಬಾರರು ನಾಟಕಕರಾಗಿ, ಕವಿಯಾಗಿ, ಜಾನಪದ ವಿದ್ವಾಂಸರಾಗಿ ಮತ್ತು ಸಂಶೋಧಕರಾಗಿ ನಾಡಿನ ಜನಮನದಲ್ಲಿ ನೆಲೆಯಾಗಿದ್ದಾರೆ. ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ, ಕಬೀರ್ ಸಮ್ಮಾನ, ಮಾಸ್ತಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುಮಾರನ್ ಆಶಾನ್ ಅವಾರ್ಡ್, ಜೋಶುವ ಸಾಹಿತ್ಯ ಪುರಸ್ಕಾರಂ ಮೊದಲಾದ ಪ್ರಶಸ್ತಿಗಳು ಕಂಬಾರರಿಗೆ ಸಂದಿವೆ.
ಡಾ.ಕಂಬಾರರು 25 ನಾಟಕಗಳು, 11 ಕವನ ಸಂಕಲನಗಳು, 5 ಕಾದಂಬರಿಗಳು, 16 ಸಂಶೋಧನಾ ಪ್ರಬಂಧಗಳು ಮತ್ತು ಅನೇಕ ಬಿಡಿ ಲೇಖನಗಳಿಂದ ಕನ್ನಡ ಸಾಹಿತ್ಯ ಲೋಕವನ್ನು ಸಮೃದ್ದಗೊಳಿಸಿದ್ದಾರೆ.