Tuesday, November 6, 2012

ಗ್ರಾಮೀಣರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಒದಗಿಸಿ-ರಿತೇಶ್ ಶೆಟ್ಟಿ


ಮಂಗಳೂರು,ನವೆಂಬರ್.06 : ``ಎಲ್ಲರಿಗೂ ಆರೋಗ್ಯ ,ಎಲ್ಲೆಡೆ ಆರೋಗ್ಯ ''ಇದು ಸರ್ಕಾರದ ಧ್ಯೇಯವಾಗಿದ್ದು, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಗ್ರಾಮೀಣರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕಿಸಲು ಜನಪ್ರತಿನಿಧಿಗಳು  ಸರ್ಕಾರದಿಂದ ಬಡವರಿಗೆ ದೊರಕುವ ಆರೋಗ್ಯ ಸೌಲಭ್ಯಗಳ ಬಗ್ಗೆ ಮಾಹಿತಿ ಅರಿತಿರುವುದು ಸೂಕ್ತ ಎಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ರಿತೇಶ್ ಶೆಟ್ಟಿ ಅವರು ತಿಳಿಸಿದ್ದಾರೆ.
           ಅವರು ಇಂದು ಜಿಲ್ಲಾ ಪಂಚಾ ಯತ್ ನೇತ್ರಾ ವತಿ ಸಭಾಂ ಗಣ ದಲ್ಲಿ ಜಿಲ್ಲಾ ಆಡ ಳಿತ,ಜಿಲ್ಲಾ ಪಂಚಾ ಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ( ಮಾಹಿತಿ ಶಿಕ್ಷಣ ಸಂಪರ್ಕ ವಿಭಾಗ) ವತಿಯಿಂದ ,  ಜಿಲ್ಲಾ ಪಂಚಾಯತ್ ಚುನಾಯಿತ ಪ್ರತಿನಿಧಿಗಳಿಗೆ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ಇಂದು ಜೀವನ ಶೈಲಿ ಹಾಗೂ ಆಹಾರ ಶೈಲಿಗಳ ಬದಲಾವಣೆಯಿಂದಾಗಿ ಹೊಸ ಹೊಸ ಕಾಯಿಲೆಗಳು ಉದ್ಭವವಾಗುತ್ತಿದ್ದು,ವೈದ್ಯಕೀಯ ರಂಗಕ್ಕೆ ಸವಾಲಾಗುತ್ತಿದೆ.ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ದೊರಕಿಸಿ ಅವರನ್ನು ಆರೋಗ್ಯವಂತರನ್ನಾಗಿಸುವುದು ಚುನಾಯಿತ ಪ್ರತಿನಿಧಿಗಳ ಕರ್ತವ್ಯ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ ಅವರು ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಜನಪ್ರತಿನಿಧಿಗಳು ಮುಂದಾಗುವಂತೆ ತಿಳಿಸಿದರು.

ಡಾ ಹೇಮಲತಾ ,ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿಯವರು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಕುರಿತು ಮಾಹಿತಿ ನೀಡಿದರೆ,ಡಾ ರುಕ್ಮಿಣಿ ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ತಾಯಿ ಮಕ್ಕಳ ಆರೋಗ್ಯದ ಬಗ್ಗೆ ಮಾತನಾಡಿ ಜಿಲ್ಲೆಯಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮಗಳು ಅತ್ಯಂತ ಪರಿಣಾಮಕಾರಿಯಾಗಿದ್ದು  ಜನಸಂಖ್ಯೆ ಬೆಳವಣಿಗೆ ಪ್ರಮಾಣ ಶೇಕಡಾ 1.7 ಕ್ಕೆ ಇಳಿದಿದೆ. ಅಂತೆಯೇ ಜಿಲ್ಲೆಯಲ್ಲಿ 2001 ರ ಜನಗಣತಿಯಂತೆ 1000 ಪುರುಷರಿಗೆ 1020 ಮಹಿಳೆಯರಿದ್ದ ಪ್ರಮಾಣ 2011 ರ ಜನಗಣತಿಯಂತೆ 1000 ಪುರುಷರಿಗೆ 1018 ಕ್ಕೆ ಇಳಿದಿದೆಯೆಂದರು. ಜಿಲ್ಲೆಯಲ್ಲಿ  ಸಾಕ್ಷರತಾ ಪ್ರಮಾಣ ಹೆಚ್ಚಾಗಿರುವುದರಿಂದ ಶಿಶು ಮರಣ ಹಾಗೂ ತಾಯಂದಿರ ಮರಣ ಪ್ರಮಾಣ ಇಳಿಕೆಯಾಗಿದೆಯೆಂದರು.
ಡಾ.ಅರುಣ್ ಕುಮಾರ್ ಅವರು ಕೀಟಜನ್ಯ ರೋಗಗಳ ನಿಯಂತ್ರಣದ ಬಗ್ಗೆ ಮಾತನಾಡಿ ಡೆಂಘೀ ಜ್ವರ ಕೇವಲ ನಗರ ಪ್ರದೇಶಕ್ಕೆ ಮಾತ್ರ  ಸೀಮಿತ ಎಂಬ ಭಾವನೆ ಇತ್ತು.ಆದರೆ ಇಂದು ಡೆಂಘೀ ಜ್ವರ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದೆ ಎಂದು ತಿಳಿಸಿ ಯಾವುದೇ ಜ್ವರದ ಲಕ್ಷಣಗಳೂ ಕಂಡು ಬಂದರೂ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಮಾರಣಾಂತಿಕವಾಗುವುದನ್ನು ತಪ್ಪಿಸಬಹುದೆಂದರು. ಸೂಕ್ತ ಸಮಯದಲ್ಲಿ ಚುಚ್ಚುಮದ್ದು ನೀಡುತ್ತಿರುವುದರ ಪರಿಣಾಮ 5 ವರ್ಷಗಳಿಂದ ಜಿಲ್ಲೆಯಲ್ಲಿ ಮಂಗನ ಕಾಯಿಲೆ  ಕಂಡುಬಂದಿಲ್ಲ ಎಂದರು. ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಮಲೇರಿಯಾ,ಡೆಂಘೀ,ಇಲಿಜ್ವರಗಳ ಕುರಿತು ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಲು ಕೋರಿದರು.
              ಡಾ ರಾಜೇಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವ ಸಾಂಕ್ರಾಮಿಕ ರೋಗಗಳೆಂದರೆ ಮಲೇರಿಯಾ ಹಾಗೂ ಡೆಂಘೀ ಜ್ವರ ಎಂದು ತಿಳಿಸಿದರು.ಮಲೇರಿಯಾ ಕಾಯಿಲೆಗೆ ನಿರ್ಧಿಷ್ಟ ಔಷಧಿ ಇದೆ.ಆದರೆ ಡೆಂಘಿಗೆ ನಿರ್ಧಿಷ್ಟ ಔಷಧಿಗಳು ಇನ್ನೂ ಲಭ್ಯವಾಗಿಲ್ಲ.ಆದ್ದರಿಂದ ಜನ ಡೆಂಘೀ ಬಾರದಂತೆ ಎಚ್ಚರ ವಹಿಸಬೇಕೆಂದು ತಿಳಿಸಿದರು.
 ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮೊಹ್ಮದ್ ನಜೀರ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಪ್ರಭಾರ) ಡಾ.ರಾಮಕೃಷ್ಣ ರಾವ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರುಗಳು ಹಾಜರಿದ್ದರು.ಆರೋಗ್ಯ ಶಿಕ್ಷಣಾಧಿಕಾರಿ ಪಾಪೇಗೌಡ ಸ್ವಾಗತಿಸಿದರು.ಉಪ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ವಂದಿಸಿದರು.