Wednesday, November 7, 2012

ನಗರದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆಗೆ ಸ್ವಸಹಾಯ ಗುಂಪುಗಳ ನೆರವು: ಡಾ.ಹರೀಶ್ ಕುಮಾರ್


ಮಂಗಳೂರು, ನವೆಂಬರ್.07 :ಮಂಗಳೂರು ನಗರವನ್ನು ಸ್ವಚ್ಛ ಸುಂದರವಾಗಿಡುವ ನಿಟ್ಟಿನಲ್ಲಿ ಮಂಗಳೂರು ಮಹಾನಗರಪಾಲಿಕೆಯು ಜಿಲ್ಲಾಡಳಿತದ ಆದೇಶದಂತೆ ನವೆಂಬರ್ 15 ರಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದು, ಈ ಬಗ್ಗೆ ಸಾರ್ವಜನಿಕರು ಜಾಗೃತಿ ಮೂಡಿಸಲು  ಸ್ವಸಹಾಯ ಸಂಘಗಳ ನೆರವು ಬೇಕಾಗಿದೆ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.
          ಅವರು ಇಂದು ಮಹಾನಗರ ಪಾಲಿಕೆಯಲ್ಲಿ ನಡೆದ 20 ಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಪದಾಧಿಕಾರಿಗಳಿಗೆ  ಪ್ಲಾಸ್ಟಿಕ್ ನಿರ್ಮೂಲನೆಯಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಯಿಂದ  ಮುಕ್ತರಾಗುವಂತೆ ಅವರಲ್ಲಿ ಅರಿವು ಮೂಡಿಸಬೇಕೆಂದರು.
        ಸ್ವಸಹಾಯ ಗುಂಪುಗಳ ಪ್ರತಿನಿಧಿಗಳಿಗೆ ಮಹಾನಗರಪಾಲಿಕೆ ವತಿಯಿಂದ ಗುರುತಿನ ಚೀಟಿಯನ್ನು ಉಪಮಹಾಪೌರರಾದ ಶ್ರೀಮತಿ ಅಮಿತ್ ಕಲಾ ಅವರು ವಿತರಿಸಿದರು. ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಆರ್.ಶಾಂತಾ,ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ  ಭಾಸ್ಕರ ಶೆಟ್ಟಿ, ವಿಪಕ್ಷ ನಾಯಕ  ದೀಪಕ್ ಪೂಜಾರಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಸಮುದಾಯ ಕಲ್ಯಾಣಾಧಿಕಾರಿ ರೂಪಾ ಶೆಟ್ಟಿ ಸ್ವಾಗತಿಸಿದರು. ಚಿತ್ತರಂಜನ್ ದಾಸ್ ವಂದಿಸಿದರು.
      20 ಸ್ವಸಹಾಯ ತಂಡಗಳನ್ನು ರಚಿಸಲಾಗಿದ್ದು,ಪ್ರತೀ ತಂಡದಲ್ಲಿ 5 ಜನ ಸದಸ್ಯರಿದ್ದು ಅವರು ತಮ್ಮ ವ್ಯಾಪ್ತಿಯ ಮನೆಮನೆಗಳಿಗೆ ಹಾಗೂ ವಾಣಿಜ್ಯ ಉದ್ದಿಮೆದಾರರನ್ನು ಭೇಟಿ ಮಾಡಿ,ಪ್ಲಾಸ್ಟಿಕ್ ಬಳಕೆಯನ್ನು ಕೈಬಿಡುವಂತೆ ಮನವಿ ಮಾಡಲಿದ್ದಾರೆ. ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಗೃಹ ರಕ್ಷಕದಳ ಮತ್ತು ಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ಬೆಳಿಗ್ಗೆ , ಮಧ್ಯಾಹ್ನ ಪ್ಲಾಸ್ಟಿಕ್ ಜಫ್ತಿಗಾಗಿ ಗಸ್ತು ನಡೆಸಲಾಗುತ್ತಿದೆ.ಇದಕ್ಕಾಗಿ ಜನರ ಸಹಕಾರವನ್ನು ಕೋರಿದೆ.




  'ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರ ಹಾನಿ ತಪ್ಪಿಸಿ'