ಮಂಗಳೂರು,ಏಪ್ರಿಲ್.02:40 ಕೋಟಿ ರೂ. ವೆಚ್ಚದಲ್ಲಿ 135 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಕೆರೆ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಯ ಸ್ವತಂತ್ರ ತನಿಖೆಗಾಗಿ (ಥರ್ಡ್ ಪಾರ್ಟಿ ಇನ್ಸ್ಪ್ ಪೆಕ್ಷನ್) ಆಸಕ್ತರನ್ನು ಆಹ್ವಾನಿಸಿದೆ.ಆಸಕ್ತ, ಅರ್ಹ ಅನುಭವಿಗಳು ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಕೆರೆಗಳ ಅಭಿವೃದ್ಧಿ: ಟೆಂಡರ್ ಕರೆಯಲು ಕಾಲಮಿತಿ ನಿಗದಿ: ಜಿಲ್ಲೆಯ 135 ಕೆರೆ ಹಾಗೂ ವೆಂಟೆಡ್ ಡ್ಯಾಮ್ ಗಳ ಅಭಿವೃದ್ಧಿಗೆ 40ಕೋಟಿ ರೂ.ಗಳ ಯೋಜನೆ ಸಿದ್ಧವಾಗಿದ್ದು, ಯೋಜನೆ ಅನುಷ್ಠಾನಕ್ಕೆ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.
ಸಣ್ಣ ನೀರಾವರಿ ಇಲಾಖೆಯಿಂದ 13, ಜಿಲ್ಲಾ ಪಂಚಾಯತ್ ನಿಂದ 112 ಹಾಗೂ ಮಹಾನಗರಪಾಲಿಕೆಯಿಂದ 10 ಕೆರೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಕಾಮಗಾರಿಯ 5 ಹಂತಗಳಲ್ಲಿ ಮೂರನೇ ಪಾರ್ಟಿ ತನಿಖೆ ಛಾಯಾ ಚಿತ್ರದೊಂದಿಗೆ ಕಾಮಗಾರಿ ಗುಣಮಟ್ಟದ ಬಗ್ಗೆ ವರದಿ ತಯಾರಿಸಬೇಕಿದೆ. ಈಗಾಗಲೇ ಈ ಸಂಬಂಧ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸವಿವರ ಯೋಜನಾ ವರದಿ ಸಿದ್ಧವಾಗಿದೆ. ಹಂತ ಹಂತವಾಗಿ ಏಪ್ರಿಲ್ 5 ರಿಂದ ಟೆಂಡರ್ ಕರೆಯಲು ಆರಂಭಿಸಿದರೆ ಸರ್ಕಾರದ ನಿರ್ದೇಶನದಂತೆ ಏಪ್ರಿಲ್ 20ರೊಳಗೆ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಒಂದೇ ಬಾರಿ ಆರಂಭಿಸಬಹುದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಟೆಂಡರ್ ಪಡೆಯುವವರು ತುರ್ತಾಗಿ ಕಾಮಗಾರಿ ಮುಗಿಸಲು ಅಗತ್ಯ ಪರಿಕರ ಹಾಗೂ ಸೌಕರ್ಯಗಳೊಂದಿಗೆ ಸಜ್ಜಾಗಿರಬೇಕು; ಏಕಕಾಲದಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳನ್ನು ಮುಗಿಸಬೇಕೆಂಬ ನಿಬಂಧನೆಯನ್ನು ಟೆಂಡರ್ ನಲ್ಲಿ ಸೇರಿಸಬೇಕೆಂದೂ ಜಿಲ್ಲಾಧಿಕಾರಿಗಳು ಸೂಚಿಸಿದರು.
ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್:
ಈ ಸಂದರ್ಭದಲ್ಲಿ ಒತ್ತುವರಿಯಾಗಿದ್ದರೆ ಅದನ್ನು ತೆರವು ಗೊಳಿಸಲು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋಸ್ರ್ ರಚಿಸಿ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದರು. ಮೇ 31ರೊಳಗೆ ಕೆರಯಲ್ಲಿರುವ ನೀರನ್ನು ಪೋಲುಗೊಳಿಸದೆ ಕಾಮಗಾರಿ ಮುಗಿಸಲು ಸರ್ಕಾರದಿಂದ ಮಾರ್ಗದರ್ಶನವಿದ್ದು, ಸಮಯ ವಿಳಂಬಕ್ಕೆ ಅವಕಾಶವಿಲ್ಲದಂತೆ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪಿ. ಶಿವಶಂಕರ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರನ್ನೊಳ ಗೊಂಡಂತೆ ಸಂಬಂಧ ಪಟ್ಟ ಇಲಾಖಾಧಿಕಾರಿಗಳು, ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.