ಮಂಗಳೂರು,ಏಪ್ರಿಲ್.14:ಸ್ವಚ್ಛ ಹಸಿರು, ಪ್ರಗತಿಪರ ಮಂಗಳೂರಿನ ಮುಂದುವರಿದ ಭಾಗವಾಗಿ ಜಿಲ್ಲೆಯ ಸಮುದ್ರ ತೀರ ಸ್ವಚ್ಛತಾ ಆಂದೋಲನವನ್ನು ಎಲ್ಲರ ಸಹಕಾರದೊಂದಿಗೆ ಆಯೋಜಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತಿಳಿಸಿದ್ದಾರೆ.
ಇಂದು ಜಿಲ್ಲಾಧಿಕಾರಿ ಅಧ್ಯಕ್ಷತೆ ಯಲ್ಲಿ ನಡೆದ ಅಧಿಕಾರಿ ಗಳು, ಜನಶಿಕ್ಷಣ ಟ್ರಸ್ಟ್, ಲಯನ್ಸ್, ಜೆಸಿ,ರೋಟರಿ ಹಾಗೂ ಎಂಆರ್ ಪಿ ಎಲ್, ಎಂಸಿಎಫ್ ಹಾಗೂ ಕೆನರಾ ಚೇಂಬರ್ಸ್ ಪ್ರತಿನಿಧಿಗಳು ಭಾಗವಹಿಸಿದ್ದರು. ತೀರ ಸ್ವಚ್ಛತಾ ಆಂದೋಲನವನ್ನು ಸಮರ್ಪಕವಾಗಿ ನಡೆಸಲು ಪ್ರದೇಶವನ್ನು 5 ವಲಯಗಳನ್ನಾಗಿ ವಿಭಾಗಿಸಿದ ಜಿಲ್ಲಾಧಿಕಾರಿಗಳು ಪ್ರತಿಯೊಂದು ವಲಯಕ್ಕೂ ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಗ್ರಾಮೀಣ ವಲಯದಲ್ಲಿ ಸ್ಥಳೀಯ ಅಧಿಕಾರಿಗಳನ್ನು ನಿಯೋಜಿಸಿದರಲ್ಲದೆ, ಪರಸ್ಪರ ಸಹಕಾರ ಹಾಗೂ ಸಂವಹನದಲ್ಲಿ ಕುಂದುಂಟಾಗದಂತೆ ಕರ್ತವ್ಯ ನಿರ್ವಹಿಸಲು ಯೋಜನೆ ರೂಪಿಸಿದರು.ಜಿಲ್ಲೆಯ ಪ್ರವಾಸೋದ್ಯಮದ ಮೂಲವಾಗಿರುವ ಬೀಚ್ ಗಳನ್ನು ಸ್ವಚ್ಛಗೊಳಿಸುವುದರಿಂದಾಗುವ ಅನುಕೂಲಗಳು, ಸ್ವಚ್ಛ ಸಮಾಜದಿಂದಾಗುವ ಅನುಕೂಲಗಳನ್ನು ದೂರದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲಾಡಳಿತ ಆಯೋಜಿಸುವ ಇಂತಹ ಕಾರ್ಯಕ್ರಮಗಳಿಗೆ ಉತ್ತಮ ಆಯೋಜಕರನ್ನು ಹುಡುಕುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ತಲಪಾಡಿಯಿಂದ-ನೇತ್ರಾವತಿ, ಬೆಂಗ್ರೆಯಿಂದ- ಎನ್ ಎಂ ಪಿ ಟಿ ಸೌತ್, ಪಣಂಬೂರು-ಹೊಸಬೆಟ್ಟು, ಹೊಸಬೆಟ್ಟು-ಸಸಿಹಿತ್ಲು, ಚಿತ್ರಾಪುರ- ಹೆಜಮಾಡಿ ಎಂದು ವಿಭಾಗಿಸಿ ಬಳಿಕ ಹಳ್ಳಿ ಮಟ್ಟದಲ್ಲಿ ಸಮನ್ವಯ ಸಾಧಿಸುವಂತೆ, ಹಾಗೂ ಈ ಸಂಬಂಧ ನಿರಂತರತೆ ಸಾಧಿಸಲು ಯತೀಶ್ ಬೈಕಂಪಾಡಿ ಸಲಹೆ ಮಾಡಿದರು. ಸ್ವಚ್ಛತಾ ಪರಿಕರಗಳು, ಶ್ರಮ, ಜನ ಸಂಪನ್ಮೂಲ, ಉದ್ದೇಶ ಹಾಗೂ ಕಾರ್ಯಕ್ರಮದ ಸಫಲತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳು, ಮನಾಪ ಆಯುಕ್ತರು, ಸಿಇಒ ಅವರು ಉಪಸ್ಥಿತರಿದ್ದರು.
ನಾಲ್ಕರಿಂದ ಐದು ಸಾವಿರ ಜನರ ಪಾಲ್ಗೊಳ್ಳುವಿಕೆಯನ್ನು ಸಭೆಯಲ್ಲಿ ಖಚಿತಪಡಿಸಿಕೊಳ್ಳಲಾಯಿತು. 22 ತಂಡಗಳನ್ನು ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಒಟ್ಟು 34 ಕಿಮೀ ಸಮುದ್ರ ತೀರ ಗುರುತಿಸಲಾಯಿತು. ಮಂಗಳವಾರದೊಳಗೆ ಈ ಸಂಬಂದ ಇನ್ನೊಂದು ವಲಯ ಸಭೆಯನ್ನು ನಡೆಸಲು ನಿರ್ಧರಿಸಲಾಯಿತಲ್ಲದೆ, ಇದಕ್ಕೂ ಮೊದಲು ಗ್ರಾಮಾಂತರ ವಲಯದಲ್ಲೂ ಸಭೆ ನಡೆಸಲು ತೀರ್ಮಾನಿಸಲಾಯಿತು.
ಮೇ1ರಿಂದ ಮಂಗಳೂರು ಸೆಂಟ್ರಲ್ ನಲ್ಲಿ ಪ್ರೀ ಪೇಯ್ಡ್ ಆಟೋ ಕೇಂದ್ರ:
ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋ ನಿಲ್ದಾಣವನ್ನು ಮೇ ಒಂದರಿಂದ ಆರಂಭಿಸಲು ನಿನ್ನೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಸುರಕ್ಷತಾ ಸಭೆಯಲ್ಲಿ ನಿರ್ಧರಿಸಲಾಯಿತು.ಚೇಂಬರ್ ಆಫ್ ಕಾಮರ್ಸ್ ನವರು ಈ ಸಂಬಂಧ ಅಗತ್ಯ ಮೂಲಭೂತ ಸೌಕರ್ಯಗಳನ್ನು ಪ್ರಾಯೋಜಿಸಲು ಮುಂದೆ ಬಂದಿದ್ದು, ರೈಲ್ವೇ ಅವರು ಇದಕ್ಕೆ ಜಾಗ ನೀಡಲು ಒಪ್ಪಿದ್ದಾರೆ. ಈ ಸಂಬಂಧ ಆಟೋ ಚಾಲಕರಿಗೆ ಅಗತ್ಯ ತರಬೇತಿ ನೀಡಲಾಗುವುದು. ಆಟೋ ರಿಕ್ಷಾದವರು ಈ ವ್ಯವಸ್ಥೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.