ಮಂಗಳೂರು,ಏಪ್ರಿಲ್.19:ಸುವರ್ಣ ಭೂಮಿ ಯೋಜನೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 25 ಕೊನೆಯ ದಿನಾಂಕವಾಗಿದ್ದು ಜಿಲ್ಲೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಆದಷ್ಟು ಶೀಘ್ರ ಅರ್ಜಿ ಸಲ್ಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಹೇಳಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುವರ್ಣ ಭೂಮಿ ಯೋಜನೆಯ ಅನುಷ್ಠಾನ ಕುರಿತಂತೆ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಫಲಾನುಭವಿಗಳು ಆಯಾಯ ತಾಲೂಕು, ಗ್ರಾಮ ಪಂಚಾಯತ್ ಗಳಿಂದ ಅರ್ಜಿ ಪಡೆದು ಭರ್ತಿ ಮಾಡಿ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಬೇಕು. ಈ ಯೋಜನೆ ಯಶಸ್ವಿಯಾಗಲು ಸಂಬಂಧಪಟ್ಟ ಇಲಾಖೆಗಳು ರೈತರಿಗೆ ಸರಿಯಾದ ಮಾಹಿತಿ ಒದಗಿಸುವ ಕೆಲಸ ಮಾಡಬೇಕು.ನೋಡೆಲ್ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು.ಆಯಾ ತಾಲೂಕಿನಲ್ಲಿ ತಹಶೀಲ್ದಾರ್ ಮತ್ತು ಉಪ ಆಯುಕ್ತರ ನೇತೃತ್ವದಲ್ಲಿ ಮುಂದಿನ ಎರಡು ದಿನಗಳೊಳಗೆ ಸಭೆ ನಡೆಸಬೇಕೆಂದು ಸೂಚಿಸಿದರು.
ರೈತ ಸಂಪರ್ಕ ಕೇಂದ್ರಕ್ಕೆ ಬಂದ ಅರ್ಜಿಗಳನ್ನು ಶೀಘ್ರವಾಗಿ ಪರಿಶೀಲಿಸಿ ವಿಲೇವಾರಿ ಮಾಡುನ ಕಾರ್ಯ ನಡೆಯಬೇಕು. ಇಲಾಖೆ ನಿಗದಿ ಪಡಿಸಿದ ವರ್ಗ,ಜಾತಿವಾರು ಅರ್ಹತೆ ಇರುವ ಅರ್ಜಿಗಳು ಹೆಚ್ಚು ಬಂದಲ್ಲಿ ಫಲಾನುಭವಿಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಬೇಕು. ಈ ಎಲ್ಲಾ ಪ್ರಕ್ರೀಯೆ ಮೇ.9 ರ ಒಳಗೆ ಮುಗಿಸಬೇಕಾಗಿದೆ ಎಂದರು. ಜಿಲ್ಲಾ ಪಂಚಾಯತ್ ಸಿಇಓ ಪಿ. ಶಿವಶಂಕರ್,ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪದ್ಮಯ್ಯ ನಾಯ್ಕ್ ಮತ್ತಿತರ ಅಧಿಕಾರಿಗಳು ಸಭೇಯಲ್ಲಿ ಪಾಲ್ಗೊಂಡಿದ್ದರು.