ಮಂಗಳೂರು,ಎಪ್ರಿಲ್.23:ಮಂಗಳೂರು ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮತ್ತು ಲೇಗೋಷನ್ ಆಸ್ಪತ್ರೆಗಳ ಬಳಕೆ ಶುಲ್ಕ ಹಾಗೂ ಕ್ಲಿನಿಕಲ್ ಫೀಗಳಿಂದ ಸಂಗ್ರಹವಾಗಿರುವ ಆರೋಗ್ಯ ರಕ್ಷಾ ನಿಧಿ ಮೊತ್ತ ರೂ.8,22,66,529 ನ್ನು ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿದ್ದು,ಈ ಮೊತ್ತದಿಂದ ಎರಡೂ ಆಸ್ಪತ್ರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರಾದ ಸುಬೋಧ್ ಯಾದವ್ ತಿಳಿಸಿದ್ದಾರೆ.ಅವರು ಎಪ್ರಿಲ್ 22 ರಂದು ಈ ಸಂಬಂಧ ತಮ್ಮ ಕಚೇರಿಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿದ್ದರು.
ಆರೋಗ್ಯ ರಕ್ಷಾ ಸಮಿತಿ ವತಿಯಿಂದ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಹಾಗೂ ಲೇಡಿಗೋಷನ್ ಆಸ್ಪತ್ರೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು. ನಿರ್ಮಿತಿ ಕೇಂದ್ರದವರು ವೆನ್ಲಾಕ್ ಆಸ್ಪತ್ರೆಯ ಆವರಣಗೋಡೆ ಮತ್ತು ಚರಂಡಿ ಕಾಮಗಾರಿ ಹಾಗೂ ಆಸ್ಪತ್ರೆಯ ನೀರಿನ ಪೈಪ್ಲೈನ್ ಗಳನ್ನು ಬದಲಾಯಿಸಿ ಪಿವಿಸಿ ಪೈಪ್ ಅಳವಡಿಸುವ ಕಾಮಗಾರಿಯ ವೆಚ್ಚದ ಶೇ.50 ರಷ್ಟು ಹಣ ಪಡೆದು ಕಾಮಗಾರಿ ಇನ್ನು ಪೂರ್ಣಗೊಳಿಸದಿರುವ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಮಿತಿ ಕೇಂದ್ರ ಅಧಿಕಾರಿಗಳನ್ನು ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ 2009-10 ನೇ ಸಾಲಿನ ಆರೋಗ್ಯ ರಕ್ಷಾ ಸಮಿತಿ ಲೆಕ್ಕ ಪರಿಶೋಧನೆಗೆ ಅನುಮೋದನೆ ನೀಡಲಾಯಿತು. ಡಾ.ಶಕುಂತಳಾ ಲೇಡಿಗೋಷನ್ ಆಸ್ಪತ್ರೆ ಅಧೀಕ್ಷಕಿ ,ವೆನ್ಲಾಕ್ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ.ಸಂಗಮೇಶ್ವರ್,ನಿವಾಸಿ ವೈದ್ಯಾಧಿಕಾರಿ ಡಾ .ಸರೋಜ ಮುಂತಾದವರು ಹಾಜರಿದ್ದರು.