
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು, ಬಂಟ್ವಾಳ,ಪುತ್ತೂರು ಹಾಗೂ ಸುಳ್ಯ ತಾಲ್ಲೂಕುಗಳು ಗಡಿನಾಡ ತಾಲ್ಲೂಕುಗಳಾಗಿದ್ದು,ಗಡಿನಾಡ ಉತ್ಸವ ಸಂದರ್ಭದಲ್ಲಿ ಇಲ್ಲಿಯ ಕನ್ನಡ ಶಾಲೆಗಳ ಸ್ಥಿತಿಗತಿಗಳನ್ನು ಅರಿಯುವುದು,ಇರುವ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಕಂಡು ಕೊಳ್ಳುವುದು ಹಾಗೂ ಗಡಿನಾಡು ಪ್ರದೇಶಗಳ ಸ್ಥಳೀಯ ಕಲಾ ಶ್ರೀಮಂತಿಕೆಯ ಅನಾವರಣ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗಡಿ ತಾಲ್ಲೂಕುಗಳ ಸಮಸ್ತ ಅಭಿವೃದ್ಧಿಗೆ ಗಡಿನಾಡು ಉತ್ಸವಕ್ಕೆ ನಾಂದಿಯಾಗಬೇಕೆಂದು ಸಭೆಯಲ್ಲಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರಾ ಅವರು ತಿಳಿಸಿದರು.
ಗಡಿನಾಡು ತಾಲ್ಲೂಕುಗಳಲ್ಲಿ ಉತ್ತಮ ಗ್ರಂಥಾಲಯಗಳ ವ್ಯವಸ್ಥೆ,ರಸ್ತೆಗಳ ದುರಸ್ಥಿ ಶಾಲಾ ಕಟ್ಟಡಗಳ ದುರಸ್ಥಿ ಹೀಗೆ ಹತ್ತಾರು ಮೂಲಭೂತ ಸೌಲಭ್ಯಗಳ ಕಡೆ ಗಡಿನಾಡು ಉತ್ಸವದಲ್ಲಿ ಗಮನ ಹರಿಸಬೇಕಿದೆ ಎಂದು ಸಭೆಯಲ್ಲಿದ್ದ ಇತರ ಪ್ರಮುಖರು ಅಭಿಪ್ರಾಯ ಪಟ್ಟರು.ಎಪ್ರಿಲ್ 27 ರಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಹಾಸ ಗುರಪ್ಪ ಬೆಲ್ಲದ ಅವರು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು,ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳ ಒಳಗೊಂಡಂತೆ ಎಲ್ಲರನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪುತ್ತೂರು ಉಪ ವಿಭಾಗಾಧಿಕಾರಿ ಡಾ.ಹರೀಶ್ ಕುಮಾರ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಂಗಳಾ ವೆಂ.ನಾಯಕ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.