ಮಂಗಳೂರು,ಎಪ್ರಿಲ್.18:ಮೀನುಗಾರರಿಗೆ ಅನುಕೂಲವಾಗುವಂತೆ ಈ ಹಿಂದೆ ಇದ್ದಂತೆ ರೂಟ್ ಸಂ.26,32 ಹಾಗೂ ಇನ್ನು ಕೆಲವು ಮಾರ್ಗದ ಬಸ್ಸುಗಳನ್ನು ಹಳೆ ಬಂದರು ಪ್ರದೇಶದ ಮೀನುಗಾರಿಕಾ ಬಂದರ್ ವರೆಗೆ ವಿಸ್ತರಣೆ ಮಾಡಲು ಕ್ರಮಕೈಗೊಳ್ಳುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಮೀನುಗಾರರ ಸಂಘದ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ.
ಅವರು ಇಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೀನುಗಾರಿಕೆಗೆ ಸಂಬಂಧಿಸಿದ ವಿಷಯಗಳ ಕುರಿತ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಮೀನುಗಾರರ ಸೂಕ್ತ ರಕ್ಷಣೆಗೆ ಸಂಘದ ಸದಸ್ಯರು ಜಿಲ್ಲಾಧಿಕಾರಿಗಳನ್ನು ವಿನಂತಿಸಿದರು. ಇತ್ತೀಚೆಗೆ ಮೀನುಗಾರರಿಗೆ ಅಪರಾತ್ರಿಯಲ್ಲಿ ಮೀನುಗಾರಿಕೆ ಮುಗಿಸಿ ಬಂದಾಗ ತಂಡೋಪತಂಡಗಳಲ್ಲಿ ದುಷ್ಕರ್ಮಿಗಳು ತಲವಾರು,ಲಾಂಗುಗಳನ್ನು ಹಿಡಿದು ಬೆದರಿಸಿ ಬೆಲೆಬಾಳುವ ಸಿಗಡಿ ಅಂಜಿಲ್,ಮಾಂಜಿ ಮೀನುಗಳನ್ನು ದೋಚುತ್ತಿದ್ದಾರೆ. ಇಂತಹ ದುಷ್ಕರ್ಮಿಗಳಿಂದ ಮೀನುಗಾರರನ್ನು ರಕ್ಷಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಚರ್ಚಿಸಿದ ಇತರ ವಿಷಯಗಳೆಂದರೆ, ಗುರುಪುರ ನದಿಯಲ್ಲಿ ತುಂಬಿರುವ ಹೂಳು ತೆಗೆಯುವುದು,ಎಂಆರ್ ಪಿಎಲ್-ಒಎನ್ ಜಿಸಿಯವರು ನವಮಂಗಳೂರು ಬಂದರಿನ ಎದುರು ಸುಮಾರು 16 ಕಿ.ಮೀ.ದೂರದಲ್ಲಿ ನಿರ್ಮಿಸುತ್ತಿರುವ ತೇಲು ಜೆಟ್ಟಿಯ ಹಾಗೂ ಪೈಪ್ ಲೈನ್ ಗಳ ಕುರಿತಂತೆ ಚರ್ಚಿಸಲಾಯಿತು.
ಮೀನುಗಾರಿಕಾ ಇಲಾಖೆ ಉಪನಿರ್ದೇಶಕರು ಹಾಗೂ ವಿವಿಧ ಮೀನುಗಾರಿಕಾ ಬೋಟ್ ಗಳ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.