ಅತಿವೃಷ್ಠಿ ಹಾಗೂ ಅನಾವೃಷ್ಠಿ ಜಿಲ್ಲೆಯನ್ನು ಕಾಡುತ್ತಿದ್ದು, ಈ ಸಂಬಂಧ ತುರ್ತು ಹಾಗೂ ಶಾಶ್ವತ ಪರಿಹಾರ ಯೋಜನೆಗಳನ್ನು ರೂಪಿಸುವ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯರು ಆಗ್ರಹಿಸಿದರು. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ ಶಿವಶಂಕರ್ ಅವರು, ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ 983 ಮಿನಿ ನೀರು ಸರಬರಾಜು ಯೋಜನೆ, 1,200 ಪೈಪ್ ವಾಟರ್ ಸಪ್ಲೈ ಯೋಜನೆ, 5,200 ಹ್ಯಾಂಡ್ ಪಂಪ್ಸ್ ಯೋಜನೆಗಳಿರುವುದಾಗಿ ಮಾಹಿತಿ ನೀಡಿದರು. ಕುಡಿಯುವ ನೀರಿನ ಯೋಜನೆಯಡಿ 36 ಲಕ್ಷ ಜನರ ಪೂರೈಕೆಗಾಗುವಷ್ಟು ನೀರಿದ್ದು, ಈ ನೀರು ಇಂದು 4 ಲಕ್ಷ ಜನರ ಉಪಯೋಗಕ್ಕೆ ಮೀಸಲಾಗಿದೆ. ಆದರೆ ವಿದ್ಯುತ್ ಬಿಲ್ ಪಾವತಿಯೇ ಬಾಕಿ ಇದೆ. ಬೋರ್ ವೆಲ್ ಆಧಾರಿತ ನೀರಾವರಿಗೆ ಸಮೀಕ್ಷೆಯಾಗಿದೆ. ಕಿನ್ನಿಗೋಳಿ, ಮಳವೂರಿನಲ್ಲಿ ಮೇ ಅಂತ್ಯದೊಳಗೆ ಮಲ್ಟಿ ವಿಲೇಜ್ ಸಪ್ಲೈ ಯೋಜನೆಯಡಿ ನೀರು ವಿತರಿಸಲಾಗುವುದು.
ಸಮೀಕ್ಷೆಯ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಹಕರಿಸಿದರೆ ಮಾತ್ರ ಸಮಗ್ರವಾಗಿ ಯೋಜನೆ ರೂಪಿಸಲು ಸಾಧ್ಯ ಎಂದರು. ಕಳೆದ ಸಾಲಿನಲ್ಲಿ ಟಾಸ್ಕ್ ಫೋಸ್ರ್ ಗೆ ನೀಡಿದ ಹಣದಲ್ಲಿ ತಾಲೂಕುವಾರು ಉಳಿಕೆಯಾದ ಹಣವನ್ನು ಬಳಸಿಕೊಳ್ಳಬಹುದೆಂದು ಸಿ ಇ ಒ ಹೇಳಿದರು. ಬಂಟ್ವಾಳದಲ್ಲಿ 7.46 ಲಕ್ಷ, ಪುತ್ತೂರಿನಲ್ಲಿ 1.65 ಲಕ್ಷ, ಬೆಳ್ತಂಗಡಿಯಲ್ಲಿ 50,000, ಮಂಗಳೂರು ತಾಲೂಕಿನಲ್ಲಿ 18 ಲಕ್ಷ ಉಳಿದಿದೆ. ಈ ಹಣವನ್ನು ಮರುಬಳಕೆ ಮಾಡಬಹುದು ಎಂದರು.
ಅಂಗನವಾಡಿ ಕೇಂದ್ರಗಳು ಸಂಜೆ 4 ಗಂಟೆಯವರೆಗೆ ಕರ್ತವ್ಯ ನಿರ್ವಹಿಸಬೇಕು ಎಂಬುದಕ್ಕೆ ಸಭೆ ಆಕ್ಷೇಪ ವ್ಯಕ್ತವಪಡಿಸಲಿಲ್ಲ; ಆದರೆ ಅಲ್ಲಿನ ಪುಟಾಣಿಗಳಿಗೆ ಪ್ರಸ್ತುತ ಒದಗಿಸುತ್ತಿರುವ ಆಹಾರದ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಅಂಗನವಾಡಿ ಕಾರ್ಯಕರ್ತರ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ `ಪ್ರಸೂತಿ ಆರೈಕೆ' ಹೆಸರಲ್ಲಿ ನೀಡಲಾಗುವ ಪ್ರೋತ್ಸಾಹಧನ ಇನ್ನೂ ಫಲಾನುಭವಿಗಳಿಗೆ ಲಭಿಸಿಲ್ಲ ಎಂಬ ಅಂಶ ಚರ್ಚೆಯ ವೇಳೆ ಬಹಿರಂಗಗೊಂಡಿತು.
ಮಾಣಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದೀರ್ಘಕಾಲದಿಂದ ಸೇವೆಗೆ ಗೈರುಹಾಜರಾಗಿರುವುದು, ಕೆಲವರು ಕೇಂದ್ರ ಸ್ಥಾನದಲ್ಲಿ ವಾಸ ಇಲ್ಲದಿರುವುದು ಹಾಗೂ ಆರೋಗ್ಯ ಉಪಕೇಂದ್ರಗಳಲ್ಲಿ ಆರೋಗ್ಯ ಸಹಾಯಕಿಯರು ವಾಸ ಇಲ್ಲದಿರುವುದು ಸಭೆಯಲ್ಲಿ ಚರ್ಚೆಗೆ ಬಂತು.
ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್ ಸಭೆಯಲ್ಲಿ ಉಪಸ್ಥಿತರಿದ್ದರು, ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ಧನ್ ಉಪಸ್ಥಿತರಿದ್ದರು.