ಮಂಗಳೂರು, ಫೆಬ್ರವರಿ 06:ಗಂಡು ಬೇಕೆಂಬ ಹಂಬಲ,ವರದಕ್ಷಿಣೆ ಪಿಡುಗು ಮುಂತಾದವುಗಳಿಂದ ಇಂದು ಹೆಣ್ಣು ಭ್ರೂಣ ಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಿದ್ದು ಇದು ಗಂಡು ಹೆಣ್ಣಿನ ಅನುಪಾತದಲ್ಲಿ ಭಾರಿ ವ್ಯತ್ಯಾಸಕ್ಕೆ ಕಾರಣವಾಗಿದ್ದು, ಸಾಮಾಜಿಕ ಕ್ಷೊಬೆಗೆ ಕಾರಣವಾಗಲಿದೆಯೆಂದು ಜನನ ಪೂರ್ವ ಲಿಂಗ ಪತ್ತೆ ತಡೆ ಕಾಯಿದೆ 1994 ಮತ್ತು 1996 ರ ಕಾನೂನು ಜಿಲ್ಲಾ ಸಲಹಾ ಸಮಿತಿ ತನ್ನ ಆತಂಕ ವ್ಯಕ್ತಪಡಿಸಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶನಿವಾರ ಅವರ ಕಚೇರಿಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು.ಮೈಸೂರು ಜಿಲ್ಲೆಯಲ್ಲಿ 139 ಆಸ್ಪತ್ರೆಗಳು ಸ್ಕಾನಿಂಗ್ ಇತ್ಯಾದಿ ಮಾಡುವ ಬಗ್ಗೆ ನೊಂದಾಯಿಸಿಕೊಂಡಿದ್ದು ಇಲ್ಲಿ ಯಾವುದೇ ರೀತಿಯ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡಲಾಗುತ್ತಿಲ್ಲ ಎಂದು ಸಭೆಗೆ ತಿಳಿಸಲಾಯಿತು.2006-07 ರಲ್ಲಿ 1000 ಗಂಡಸರಿಗೆ 982 ಹೆಂಗಸರು ಇದ್ದ ಅನುಪಾತ 2009-10 ರಲ್ಲಿ 923 ಕ್ಕೆ ಇಳಿದಿದೆ ಎಂದು ಗ್ರಾಮೀಣ ಸಮುದಾಯ ಆರೋಗ್ಯ ಮಿಷನ್ನ ಮುಖ್ಯಸ್ಥೆ ಡಾ.ರುಕ್ಮಿಣಿ ತಿಳಿಸಿದರು.

ಜಿಲ್ಲೆಯಲ್ಲಿ ಯಾವುದಾದರೂ ಸ್ಕ್ಯಾನಿಂಗ್ ಸೆಂಟರ್ ಆಗಲೀ ಖಾಸಗೀ ನರ್ಸಿಂಗ್ ಹೋಮ್ ಗಳಾಗಲೀ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಹಚ್ಚುವ ಅಕ್ರಮ ಕೃತ್ಯಗಳಲ್ಲಿ ತೊಡಗಿರುವ ಬಗ್ಗೆ ಸಾರ್ವಜನಿಕರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಗೆ ತಿಳಿಸಬೇಕಾಗಿ ಹಾಗೂ ಅಂತಹ ಮಾಹಿತಿ ನೀಡಿದವರ ಗೌಪ್ಯತೆ ಕಾಪಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಓ. ರಂಗಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಸಭೆಯಲ್ಲಿ ಯು.ಪಿ ಶೆಣೈ ಮುಂತಾದವರು ಭಾಗವಹಿಸಿದ್ದರು.