ಮಂಗಳೂರು, ಫೆಬ್ರವರಿ.11: ರಕ್ತದಾನ ಮಹಾದಾನ. ರಕ್ತಕ್ಕೆ ಪಯರ್ಾಯವನ್ನು ಇದುವರೆಗೆ ಕಂಡು ಹಿಡಿಯಲು ವಿಜ್ಞಾನಿಗಳಿಂದ ಸಾಧ್ಯವಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಒ. ಆರ್ ಶ್ರೀರಂಗಪ್ಪ ಅವರು ಹೇಳಿದರು.

ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಹಿರಿಯ/ಕಿರಿಯ ಆರೋಗ್ಯ ಸಹಾಯಕರ ಸಂಘ ಮಂಗಳೂರು ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಅಪಘಾತಗಳು, ತುರ್ತು ಶಸ್ತ್ರ ಚಿಕಿತ್ಸೆಗಳು, ಹೆರಿಗೆ ಸಮಯದಲ್ಲಾಗುವ ರಕ್ತಸ್ರಾವ ದಂತಹ ಸಂದಭಗಳಲ್ಲಿ ರಕ್ತಕ್ಕೆ ಪರ್ಯಾಯವಿಲ್ಲ. ಆರೋಗ್ಯವಂತ ವ್ಯಕ್ತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಯಾವುದೇ ನಷ್ಟವಿಲ್ಲ ಎಂದು ಅವರು ನುಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಆರೋಗ್ಯ ಇಲಾಖೆ ಜಯರಾಮ ಪೂಜಾರಿ ಅವರು, ಯಾವುದೇ ಕೆಲಸಗಳನ್ನು ಮಾಡುವಾಗ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಕರ್ತವ್ಯ ನಿರ್ವಹಿಸಬೇಕು. ಕಳೆದ ಸಾಲಿನಲ್ಲಿ ತುರ್ತು ಸಂದರ್ಭಗಳಿಗೆ ಸ್ಪಂದಿಸಿ ಬಂಟ್ವಾಳ ಆಸ್ಪತ್ರೆಯ ಎಕ್ಸ್ ರೇ ಟೆಕ್ನಿಷಿಯನ್ ಯಮನಪ್ಪ ಅವರು 48 ಬಾರಿ ರಕ್ತದಾನ ಮಾಡಿದ್ದರು. ಇಲ್ಲಿಯ ವಾಹನ ಚಾಲಕರಾದ ಲಕ್ಷ್ಮಣ ಗೌಡ 25 ಬಾರಿ ರಕ್ತದಾನ ಮಾಡಿದ್ದರು. ಆರ್ ಎನ್ ಟಿ ಸಿ ಪಿಯ ಮೇಲ್ಚಿಚಾರಕರಾದ ಡೇವಿಡ್ ಅವರು 36 ಬಾರಿ ರಕ್ತದಾನ ಮಾಡಿದ್ದರು. ಇವರನ್ನು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯ ಆರ್ಎಪಿಸಿಸಿ ಹಾಲ್ ನಲ್ಲಿ ಸನ್ಮಾನಿಸಲಾಯಿತು.ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕಾರ್ಯಕ್ರಮ ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಸ್ವಾಗತಿಸಿದರು. ಎಸ್. ಎ. ರಹಿಮಾನ್ ವಂದಿಸಿದರು.