Thursday, September 30, 2010
ಪಾಲಿಕೆ ವ್ಯಾಪ್ತಿಯಲ್ಲಿ ಹೆಲ್ಮೆಟ್ ಕಡ್ಡಾಯ
ಮಂಗಳೂರು,ಸೆ.30:ಮಂಗಳೂರು ಸೇರಿದಂತೆ ರಾಜ್ಯದ ಎಲ್ಲ ಮಹಾನಗರಪಾಲಿಕೆಯಲ್ಲಿ ದ್ವಿಚಕ್ರ ವಾಹನ ಚಾಲಕರು ಬ್ಯೂರೋ ಆಪ್ ಇಂಡಿಯನ್ ಸ್ಟಾಂಡರ್ಡ್ಸ್, ಸ್ಟಾಂಡರ್ಡ್ ನಂ.ಐಎಸ್ 4151:1993 ಮಾಪನ ಹೊಂದಿರುವ ಹೆಲ್ಮೆಟ್ ಧರಿಸುವಿಕೆಯನ್ನು ಕಡ್ಡಾಯಗೊಳಿಸಲಾಗಿರುತ್ತದೆ.ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹೆಲ್ಮೆಟ್ ಕಡ್ಡಾಯ ಗೊಳಿಸಲು ಕ್ರಮ ಕೈಗೊಳ್ಳ ಬೇಕೆಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾದ ಭಾಸ್ಕರ ರಾವ್ ಅವರು ಸೂಚಿಸಿದ್ದಾರೆ. ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆಯಿಂದ ಉಂಟಾಗುತ್ತಿರುವ ಅಪಘಾತಗಳಲ್ಲಿ ಬಹುತೇಕ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೆ ದ್ಚಿಚಕ್ರ ವಾಹನ ಚಾಲಕರು ಗಂಭೀರ ಸ್ವರೂಪದ ಗಾಯಾಳುಗಳಾಗುವುದಲ್ಲದೆ, ಶಾಶ್ವತ ಅಂಗವಿಕಲತೆಗೆ ಈಡಾಗುತ್ತಿದ್ದಾರೆ. ಅಪಘಾತ ಪ್ರಕರಣಗಳಲ್ಲಿ ಮರಣ ಪ್ರಮಾಣ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಸಾರ್ವಜನಿಕರು ಮತ್ತು ಇತರ ರಸ್ತೆ ಬಳಕೆದಾರರ ಹಿತದೃಷ್ಟಿಯಿಂದ ಹಾಗೂ ದ್ಚಿಚಕ್ರ ವಾಹನ ಚಾಲಕರ ಸುರಕ್ಷತೆಯ ಸಲುವಾಗಿ ಎಲ್ಲ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದ್ದಾರೆ.