Sunday, September 5, 2010
Msez ಎರಡನೇ ಹಂತ ಭೂಸ್ವಾಧೀನಕ್ಕೆ ಅವಕಾಶವಿಲ್ಲ
ಮಂಗಳೂರು,ಸೆ.05: ಅತ್ಯಮೂಲ್ಯ ಪರಿಸರ ಹಾಗೂ ಕೃಷಿ ಭೂಮಿಯಿಂದಾವೃತವಾದ ದಕ್ಷಿಣ ಕನ್ನಡದಲ್ಲಿ ವಿಶೇಷ ಆರ್ಥಿಕ ವಲಯಕ್ಕೆ ನೀಡಲು ಉದ್ದೇಶಿಸಲಾದ ಎರಡನೇ ಹಂತದ ಭೂಸ್ವಾಧೀನಕ್ಕೆ ಅವಕಾಶ ಮಾಡಿ ಕೊಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ಸ್ಪಷ್ಟ ಪಡಿಸಿದರು. ಕ್ವೀನ್ಸ್ ಬ್ಯಾಟನ್ ರಿಲೇ ತಂಡವನ್ನು ಸ್ವಾಗತಿಸಿದ ಬಳಿಕ ಪತ್ರಕರ್ತ ರೊಂದಿಗೆ ಮಾತನಾಡಿದ ಸಚಿವರು, ಈಗಾಗಲೇ ನಮ್ಮ ಪರಿಸರದಲ್ಲಿ ಬಹಳಷ್ಟು ಉದ್ದಿಮೆಗಳು ಸ್ಥಾಪಿತವಾಗಿದ್ದು, ವಿಶೇಷ ಆರ್ಥಿಕ ವಲಯಕ್ಕೆ ೧,೮೦೦ ಎಕರೆ ಭೂಮಿಯನ್ನು ವಶಪಡಿಸಿ ಕೊಳ್ಳಲಾಗಿದೆ. ಇನ್ನು ಮುಂದೆ ಇಂತಹ ಉದ್ದಿಮೆಗಳಿಗೆ ಜಿಲ್ಲೆಯಲ್ಲಿ ಅವಕಾಶ ನೀಡುವುದಿಲ್ಲ. ಇದರಿಂದ ನಮ್ಮ ಜನರಿಗೆ ಹೆಚ್ಚಿನ ಉಪಕಾರವಿಲ್ಲ ಎಂಬುದು ಸ್ಪಷ್ಟವಾಗಿದ್ದು, ಉದ್ದಿಮೆಗಳು ನೀಡುವ ಪರಿಹಾರ, ಉದ್ಯೋಗ ಖಾತ್ರಿ ಗಳಿಂದ ಸ್ಥಳೀಯ ಜನರಿಗೆ ಲಾಭವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗುಂಡ್ಯ ಜಲ ವಿದ್ಯುತ್ ಯೋಜನೆ ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ ಎಂಬುದನ್ನು ಸ್ಪಷ್ಟ ಪಡಿಸಿದ ಅವರು, ಪರಿಸರ ಉಳಿಸಲು ಪ್ಲಾಸ್ಟಿಕ್ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿರುವುದಾಗಿ ಹೇಳಿದರು. ಈ ಉದ್ದೇಶದಿಂದಲೇ ಗ್ರೀನ್ ಪೊಲೀಸ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದರು. ಪರಿಸರ ನಾಶದ ದುಷ್ಪರಿಣಾಮಗಳು ನಮ್ಮ ಕಣ್ಣ ಮುಂದಿದ್ದು ಪರಿಸರ ನಾಶ ತಡೆಯಲು ಬೇಕಾದ ಕ್ರಮಗಳನ್ನು ಕೈಗೊಳ್ಳಲು ಸರ್ಕಾರದ ಮಟ್ಟದಲ್ಲಿ ಯತ್ನಿಸುವುದಾಗಿಯೂ ಹೇಳಿದರು.