Saturday, September 4, 2010
ಜಿಲ್ಲೆಯ ಅಭಿವೃದ್ಧಿಗೆ 26.12 ಕೋಟಿ ರೂ. ಬಿಡುಗಡೆ
ಮಂಗಳೂರು,ಸೆ.04: ದಕ್ಷಿಣ ಕನ್ನಡ ಜಿಲ್ಲೆಗೆ ಆಗಸ್ಟ್ 23 ರಂದು ರಾಜ್ಯ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರು ಭೇಟಿ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಒಟ್ಟು 26.12 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಚಿಕ್ಕ ಕಾಲು ಸೇತುವೆಗಳ ನಿರ್ಮಾಣಕ್ಕೆ ಐದು ಕೋಟಿ ರೂ., ಕದ್ರಿ ಸರ್ಕಾರಿ ಪಾಲಿಟೆಕ್ನಿಕ್ ಹಳೆ ಹಾಸ್ಟೆಲ್ ದುರಸ್ತಿಗೆ 50 ಲಕ್ಷ ರೂ., ಬಂಟ್ವಾಳ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯನ್ನು 30 ಹಾಸಿಗೆಗಳಿಂದ 100 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲು 2.5 ಕೋಟಿ ರೂ., ಬಂಟ್ವಾಳ ಪುರಸಭೆ ಅಭಿವೃದ್ಧಿಗೆ ವಿಶೇಷ ಅನುದಾನ 10 ಕೋಟಿ ರೂ., ಮಂಗಳೂರಿನ ಕದ್ರಿ ಪಾರ್ಕಿನ ಸಮಗ್ರ ಅಭಿವೃದ್ಧಿಗೆ 5 ಕೋಟಿ ರೂ.ಕದ್ರಿ ಸರ್ಕಿಟ್ ಹೌಸಿಗೆ 2 ಕೋಟಿ, ಮತ್ತು ಜಿಲ್ಲೆಯ 49 ದೇವಸ್ಥಾನ/ದೈವಸ್ತಾನಗಳ ಜೀರ್ಣೋದ್ಧಾರಕ್ಕೆ ಧಾರ್ಮಿಕ ದತ್ತಿ ಇಲಾಖೆಯಿಂದ 1.12 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಹಣವನ್ನು ವಿಳಂಬವಿಲ್ಲದೆ ಸಕಾಲದಲ್ಲಿ ಬಿಡುಗಡೆ ಮಾಡಿರುವ ಮುಖ್ಯಮಂತ್ರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಕೃತಜ್ಞತೆ ಸಲ್ಲಿಸಿದ್ದಾರೆ.