ಮಂಗಳೂರು,ಜೂ.26:ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಸಬಲೀಕರಣಗೊಳಿಸಲು ಪೂರಕ ಯೋಜನೆಗಳನ್ನು ರಾಜ್ಯ ಸರ್ಕಾರ ರೂಪಿಸಿದ್ದು, ಶಾಂತಿ ಸುವ್ಯವಸ್ಥೆಯಿಂದ ಅಭಿವೃದ್ಧಿ ಎಂಬುದನ್ನು ಮನಗಂಡಿರುವ ಆಡಳಿತ ಪೊಲೀಸ್ ಇಲಾಖೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದು ಗೃಹ ಮತ್ತು ಮುಜರಾಯಿ ಸಚಿವ ಡಾ. ವಿ.ಎಸ್. ಆಚಾರ್ಯ ಹೇಳಿದರು.
ಅವರಿಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯನ್ನು ಉದ್ಘಾಟಿಸಿ ಮಾತನಾ ಡುತ್ತಿದ್ದರು. ಪಶ್ಚಿಮದ ಹೆಬ್ಬಾಗಿ ಲಾಗಿರುವ ಜಿಲ್ಲೆಯ ಭವಿಷ್ಯತ್ತನ್ನು ಹಾಗೂ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ಮಗಳೂರು ಕಮಿಷನರೇಟನ್ನು ರೂಪಿಸ ಲಾಗಿದೆ. 4012 ನಾಗರಿಕ ಪೊಲೀಸರ(ಸಿವಿಲ್ ಕಾನ್ಸಟೇಬಲ್ಸ್) ನೇಮಕಾತಿಗ ಪ್ರಕ್ರಿಯೆ ಈಗಾಗಲೇ ಆರಂಭ ಗೊಂಡಿದೆ.400 ಸಬ್ ಇನ್ಸ್ ಪೆಕ್ಟರ್ ಗಳ ನೇಮಕಕ್ಕೆ ಅಂತಿಮ ಆದೇಶ ಸದ್ಯದಲ್ಲೇ ಹೊರ ಬೀಳಲಿದೆ. ಹೊಸದಾಗಿ 600 ಪೊಲೀಸ್ ಕಾನ್ಸಟೇಬಲ್ ಗಳ ನೇಮಕಕ್ಕೆ ಆರ್ಥಿಕ ಇಲಾಖೆಯಿಂದ ಅನುಮತಿ ದೊರಕಿದೆ. ಮಂಗಳೂರಿನ ಕಮಿಷನರೇಟ್ ಇತರ ಜಿಲ್ಲೆಗಳಿಗೆ ಮಾದರಿ ಯಾಗಬೇಕಿದೆ. ಜಿಲ್ಲೆಯ 28 ಪೊಲೀಸ್ ಸ್ಟೇಷನ್ ಗಳಲ್ಲಿ 17 ಪೊಲೀಸ್ ಸ್ಟೇಷನ್ ಗಳು ಕಮಿಷನರೇಟ್ ವ್ಯಾಪ್ತಿಗೆ ಬರಲಿದ್ದು 2011 ಜನವರಿ 26ರೊಳಗೆ 3 ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ಕಮಿಷನರೇಟ್ ಗೆ ನೂತನ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದರು. ಪುತ್ತೂರು ವಿಭಾಗವನ್ನು ವಿಭಜಿಸಿ ಬಂಟ್ವಾಳ, ಬೆಳ್ತಂಗಡಿಗಳಲ್ಲಿ ಸಬ್ ಡಿವಿಷನ್ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಆಚಾರ್ಯ ಹೇಳಿದರು. ಹುಬ್ಬಳ್ಳಿ ಮತ್ತು ಮೈಸೂರು ಪೊಲೀಸ್ ಕಮಿಷನರೇಟ್ ಗಳ ವ್ಯಾಪ್ತಿ ವಿಸ್ತರಿಸಲು ಅಧಿಕಾರಿಗಳು ಪ್ರಸ್ತಾವ ಮಂಡಿಸಿದ್ದು ಶೀಘ್ರದಲ್ಲಿಯೇ ಈ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು, ಪೊಲೀಸ್ ಇಲಾಖೆಯ ಅಭಿವೃದ್ಧಿಗೆ ಶಕ್ತಿಮೀರಿ ಯತ್ನಿಸುತ್ತಿದ್ದು ಇಲಾಖಾ ವಾಹನಗಳ ನಿರ್ವಹಣೆಗೆ ಪ್ರತ್ಯೇಕ ಸರ್ವಿಸ್ ಸ್ಟೇಷನ್ ಅಗತ್ಯವಿದೆ,ಸದ್ಯದಲ್ಲೇ ಈ ಬೇಡಿಕೆಯನ್ನು ಈಡೇರಿ ಸಲಾಗುವುದು ಎಂದರು. ಹೊಸ ಜೈಲು ನಿರ್ಮಾಣಕ್ಕೆ ಜಿಲ್ಲಾಡಳಿತ 50 ಎಕರೆ ಜಮೀನನ್ನು ಒದಗಿಸಿದೆ. ಬಂದರು ಅಧಿಕಾರಿಯ ಬಂಗಲೆಯನ್ನು ಪೊಲೀಸರಿಗೆ ನೀಡಲಾಗುವುದು. ನಗರದ ಹೃದಯ ಭಾಗದಲ್ಲಿ ಅವರಿಗೆ ಕಾರ್ಯಾನುಕೂಲಕ್ಕೆ ಅನುಕೂಲ ವಾಗುವಂತೆ ಎಲ್ಲ ಸೌಲಭ್ಯಗಳನ್ನು ಒದಗಿಸ ಲಾಗುವುದೆಂದು ಹೇಳಿದರು. ಪೊಲೀಸ್ ವಸತಿಗೃಹದ ಬಗ್ಗೆಯೂ ಗಮನಹರಿಸಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲಾಗುವುದು ಎಂದರು. ಇಲಾಖೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು ಉತ್ತಮ ಕೆಲಸ ಮಾಡುತ್ತಿರುವುದಾಗಿ ಪ್ರಶಂಸೆಯ ಮಾತು ಗಳನ್ನಾಡಿದರು.ಸಂಸತ್ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಡಿ.ವಿ.ಸದಾ ನಂದ ಗೌಡ, ಶಾಸಕ ರಾದ ಅಭಯ ಚಂದ್ರ ಜೈನ್, ರಮಾನಾಥ ರೈ, ಮೇಯರ್ ರಜನಿ ದುಗ್ಗಣ್ಣ, ಉಪ ಮೇಯರ್ ರಾಜೇಂದ್ರ ಕುಮಾರ್, ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಪಶ್ಚಿಮ ವಲಯ ಐಜಿಪಿ ಗೋಪಾಲ ಬಿ ಹೊಸೂರು, ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ವಾಗತಿಸಿ, ಉಪ ಆಯುಕ್ತ ಆರ್. ರಮೇಶ್ ವಂದಿಸಿದರು.