ಮಂಗಳೂರು, ಜೂ. 13:ಸರ್ಕಾರ ನೀಡುವ ಯೋಜನೆಗಳ ಸಂಪೂರ್ಣ ಪ್ರಯೋಜನವನ್ನು ಫನಾನುಭವಿಗಳು ಪಡೆದುಕೊಳ್ಳಬೇಕು ಮತ್ತು ಕ್ಲಪ್ತ ಸಮಯದಲ್ಲಿ ಮರುಪಾವತಿಸುವ ಮೂಲಕ ನಿಗಮದ ಉದ್ದೇಶಕ್ಕೆ ಸಹಕಾರ ನೀಡಬೇಕು ಎಂದು ರಾಜ್ಯ ಬಂದರು,ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೇಮಾರ್ ಕರೆ ನೀಡಿದರು.
ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮವು ಉಳ್ಳಾಲದ ಕೋಟೆಪುರದ ಸೈಯದ್ ಮದನಿ ಶಾಲೆಯಲ್ಲಿ ಇಂದು ಹಮ್ಮಿಕೊಂಡ `ಮನೆ ಬಾಗಿಲಿಗೆ ನಿಗಮ' ಕಾರ್ಯ ಕ್ರಮದಲ್ಲಿ ಸ್ವ ಸಹಾಯ ಸಂಘಗಳ 137 ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಚೆಕ್ ವಿತರಿಸಿದರು.ಮೈಕ್ರೋ ಕ್ರೆಡಿಟ್ ಮತ್ತು ಶ್ರಮಶಕ್ತಿ ಯೋಜನೆಯಡಿ ಒಟ್ಟು 12.37 ಲಕ್ಷ ರೂಪಾಯಿ ಮೊತ್ತದ ಚೆಕ್ ವಿತರಿಸಿ ಮಾತನಾಡಿದ ಸಚಿವರು ಈ ಹಿಂದಿನ ಸರಕಾರಗಳು ನೀಡುತ್ತಿರುವ ಸವಲತ್ತು ಗಳಿಗಿಂತ ಬಿಜೆಪಿ ಸರಕಾರ ಹೆಚ್ಚು ನೆರವು ನೀಡುತ್ತಿದೆ.ಅದನ್ನು ಸದುಪಯೋಗ ಆಗಬೇಕು.ಆಗ ಮಾತ್ರ ಸರ್ಕಾರದ ಯೋಜನೆಗಳು ಫಲ ಪ್ರದವಾಗುತ್ತವೆ ಎಂದು ಪಾಲೆಮಾರ್ ನುಡಿದರು. ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕರ್ ರಾಜ್ಯ ಬಿಜೆಪಿ ಸರಕಾರ ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಈ ಬಾರಿ ಒಟ್ಟು 251 ಕೋಟಿ ರೂಪಾಯಿ ಮಂಜೂರು ಮಾಡಿದೆ. ಅದರಲ್ಲಿ 60 ಕೋಟಿ ರೂಪಾಯಿಯನ್ನು ನಿಗಮಕ್ಕೆ ನೀಡಿದೆ. ಅದನ್ನು ರಾಜ್ಯದ 42 ಸಾವಿರ ಅಲ್ಪ ಸಂಖ್ಯಾತ ಫಲಾನು ಭವಿಗಳಿಗೆ ನೀಡಲಾಗುವುದು. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2800 ಫಲಾನು ಭವಿಗಳನ್ನು ಗುರುತಿಸಲಾಗಿದ್ದು, 4.70 ಲಕ್ಷ ರೂಪಾಯಿಯನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ನುಡಿದರು.
ಶಾಸಕ ಯು.ಟಿ.ಖಾದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಪುರಸಭೆಯ ಅಧ್ಯಕ್ಷ ಇಸ್ಮಾಯೀಲ್, ಉಪಾಧ್ಯಕ್ಷ ದಿನೇಶ್ ರೈ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಯು.ಎಚ್. ಫಾರೂಕ್ ಮತ್ತಿತರರದ್ದರು. ನಂತರ ದೇರಳಕಟ್ಟೆಯಲ್ಲೂ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯ ಅಬ್ದುಲ್ ಅಝೀಜ್ ಮಲಾರ್ ಮತ್ತಿತರರು ಈ ಸಂದರ್ಭ ಹಾಜರಿದ್ದರು