ಮಂಗಳೂರು,ಜೂ.11:ರಾಜ್ಯ ಅಭಿವೃದ್ಧಿಪಥದಲ್ಲಿ ಮುನ್ನುಗ್ಗುತ್ತಿದ್ದು,ಬದಲಾವಣೆಯ ವೇಗ, ವ್ಯಾಖ್ಯಾನ ಬದಲಾಗುತ್ತಿರುವ ಸಂದರ್ಭದಲ್ಲಿ ಎಲ್ಲ ಕ್ಷೇತ್ರದ ಪರಿಣತರ ಸೇವೆಯ ಅಗತ್ಯವನ್ನು ಮನಗಂಡ ಸರ್ಕಾರ ಎಲ್ಲ ಕ್ಷೇತ್ರದಲ್ಲೂ ವಿಶೇಷ ಕಾರ್ಯಪಡೆ ರಚನೆಗೆ ಆದ್ಯತೆ ನೀಡಿತು ಎಂದು ಗೃಹಮಂತ್ರಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ವಿ.ಎಸ್. ಆಚಾರ್ಯ ಅವರು ಹೇಳಿದರು.
ಅವರು ನಗರದ ಟಿ ವಿ ರಮಣ ಪೈ ಕನ್ವೆಂನ್ಷನ್ ಸೆಂಟರ್ ನಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಗುಣಮಟ್ಟ ಖಾತರೀಕರಣ ಹಾಗೂ ಉನ್ನತೀಕರಣದ ಸಾಮಗ್ರಿಗಳ ಬಗೆಗಿನ ವಸ್ತು ಪ್ರದರ್ಶನ ಮತ್ತು ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದರು. ಯೋಜನೆಗಳನ್ನು ರೂಪಿಸುವಾಗ, ಅನುಷ್ಠಾನಕ್ಕೆ ತರುವಾಗ ಪ್ರಾದೇಶಿಕ ವೈವಿಧ್ಯತೆಯನ್ನು ಗಮನದಲ್ಲಿರಿಸಿಬೇಕು. ಎಲ್ಲೆಡೆಗೂ ಒಂದೇ ಮಾನದಂಡವನ್ನು ಅನುಸರಿಸ ಬಾರದೆಂಬುದನ್ನು ವಿವರಿಸಿದ ಸಚಿವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ವೇಗಕ್ಕನು ಸಾರವಾಗಿ ಬೆಳೆಯದಿದ್ದರೆ ಹಿಂದುಳಿಯುವುದು ನಿಸ್ಸಂಶಯ ಎಂದರು.ರಾಜ್ಯ ಶಿಕ್ಷಣ,ಆರೋಗ್ಯ ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದ್ದರೂ, ಮೂಲಭೂತ ಸೌಕರ್ಯ, ಅದರಲ್ಲೂ ಆರ್ಥಿಕ ಮೂಲಭೂತ ಸೌಕರ್ಯಗಳ ಕ್ಷೇತ್ರದಲ್ಲಿ ಬಹಳಷ್ಟು ಹಿಂದುಳಿದಿದ್ದೇವೆ. ಗುಣಮಟ್ಟದ ವಿಷಯಕ್ಕೆ ಬಂದಾಗ ನಾವು ಸಾಧಿಸಬೇಕಾದುದು ಬಹಳಷ್ಟಿದೆ ಎಂಬುದು ಸ್ಷಪ್ಟ ಎಂದು ಸಚಿವರು ನುಡಿದರು.
ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಆದ್ಯತೆ:ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರಕ್ಕೆ ನೀಡಬೇಕಾದ ಆದ್ಯತೆ ನೀಡುತ್ತಿಲ್ಲ ಎಂಬ ಕೊರಗನ್ನು ಇಂದೂ ವ್ಯಕ್ತಪಡಿಸಿದ ಸಚಿವರು, ಈ ಕ್ಷೇತ್ರಕ್ಕೆ ವಿಶೇಷವಾಗಿ ನಾಲ್ಕು ಇಂಜಿನಿಯರಿಂಗ್ ಕಾಲೇಜುಗಳನ್ನು ಆರಂಭಿಸಬೇಕು; ವಿಶ್ವೇಶ್ವರಯ್ಯನಂತಹವರು ಮತ್ತೆ ಹುಟ್ಟಿ ಬರಲಿಲ್ಲ; ಅಂತಹ ವಿಜ್ಞಾನಿಗಳ ಅಗತ್ಯವನ್ನು ಪ್ರತಿಪಾದಿಸಿದ ಸಚಿವರು, ಪ್ರತಿಭಾನ್ವಿತರ ಅಗತ್ಯ ಈ ಕ್ಷೇತ್ರಕ್ಕಿದೆ. ಈ ಕ್ಷೇತ್ರವನ್ನು ಬಲಪಡಿಸಬೇಕಾದ ಅಗತ್ಯವಿದೆ ಎಂದರು.
ಕಾರ್ಯಾಗಾರಗಳು, ಬುಲೆಟಿನ್ ಗಳು ಇಂಜಿನಿಯರ್ ಗಳಿಗೆ ಹೊಸ ಆತ್ಮವಿಶ್ವಾಸ ತುಂಬಲು ನೆರವಾಗಲಿ ಎಂದು ಹಾರೈಸಿದರು. ರಾಜ್ಯವು ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವುದಲ್ಲದೆ, ಇನ್ನೈದು ವರ್ಷಗಳಲ್ಲಿ ಇತರರಿಗೆ ಮಾರಾಟ ಮಾಡುವ ಹಂತ ತಲುಪಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ ಎಂದರು. ಸಂಶೋಧನೆಗಳಿಲ್ಲದೆ ಅಭಿವೃದ್ಧಿಯಿಲ್ಲ ಇದಕ್ಕೆ ವಿಜ್ಞಾನಿಗಳ ಕೊಡುಗೆ ಅಗತ್ಯ ಎಂಬುದನ್ನು ಅವರು ನುಡಿದರು. ಅಧ್ಯಕ್ಷತೆ ವಹಿಸಿದ್ದ ಕಾಮಗಾರಿ ಗುಣ ಭರವಸೆ ಪಡೆಯ ಅಧ್ಯಕ್ಷ ಡಾ ಸಿ.ಎಸ್. ವಿಶ್ವನಾಥ್ ಅವರು, ಇಂಜಿನಿಯರ್ ಗಳಿಗೆ ತಂತ್ರಜ್ಞಾನ ಕುರಿತ ಅರಿವನ್ನು ಹೆಚ್ಚಿಸುವ ಯತ್ನಗಳಾಗಬೇಕು; ಅವಕಾಶಗಳನ್ನು ಕೊಡಬೇಕು ಎಂದರು.ಕಾರ್ಯಪಡೆಯ ಎಲ್ಲ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ರಾಜ್ಯ ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಜಿಲ್ಲಾಡಳಿತ ಸಂಭವನೀಯ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದೆ ಎಂದರು. ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ಕೇಂದ್ರ ಸರ್ಕಾರ ವಿಶ್ವಬ್ಯಾಂಕ್ ನೆರವು ಪಡೆದು ಯೋಜನೆ ರೂಪಿಸಲಿದೆ ಎಂದರು.