Saturday, June 5, 2010

ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ

ಮಂಗಳೂರು,ಏಪ್ರಿಲ್ 5: ಬಾಲ ಕಾರ್ಮಿಕ ವಿರೋಧಿ ದಿನದ ಬಗ್ಗೆ ಜನ ಜಾಗೃತಿ ಮೂಡಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಜೂನ್ 12ರಂದು ಬಲ್ಮಠ ಸರ್ಕಾರಿ ಕಾಲೇಜಿನಲ್ಲಿ ವಿಚಾರ ಸಂಕಿರಣ ಹಮ್ಮಿಕೊಂಡಿದ್ದು, ಈ ಸಂಬಂಧ ಜಿಲ್ಲಾ ಸತ್ರ ನ್ಯಾಯಾಧೀಶ ಎಚ್. ಎಲ್. ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ನ್ಯಾಯಲಯದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಕ್ಷಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದು ಅರ್ಥಪೂರ್ಣವಾಗಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಯಿತು.
ಎಲ್ಲ ಇಲಾಖೆಗಳು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ ನ್ಯಾಯಾಧೀಶರು ಅನಿಷ್ಠ ಪದ್ಧತಿಗಳ ವಿರುದ್ಧ ಸಮಾಜದ ಹೊಣೆಗಾರಿಕೆಯನ್ನು ಜಾಗೃತಿ ಕಾರ್ಯಕ್ರಮಗಳ ಮೂಲಕ ಹಮ್ಮಿಕೊಳ್ಳಬೇಕಾದ ಅಗತ್ಯವನ್ನು ಸಭೆಯಲ್ಲಿ ವಿವರಿಸಿದರು.ಶಾಲಾ ಮಕ್ಕಳು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ತಮ್ಮ ಪೋಷಕರಿಂದ ಮಕ್ಕಳು ಬಿಳಿ ಹಾಳೆಯಲ್ಲಿ ನಮ್ಮ ಮನೆಯಲ್ಲಿ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸುವುದಿಲ್ಲ ಎಂಬ ಘೋಷ ವಾಕ್ಯ ಬರೆಸುವುದರ ಮುಖಾಂತರ ಪೋಷಕರಲ್ಲೂ ಜಾಗೃತಿ ಮೂಡಿಸುವ ಬಗ್ಗೆ ಚಿಂತಿಸಲಾಯಿತು.ತಮ್ಮ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕರ ಬಡಾವಣೆ, ಕೈಗಾರಿಕಾ ಪ್ರದೇಶಗಳು ಮತ್ತು ಇತರ ಸ್ಥಳಗಳಲ್ಲಿ ಬಾಲ ಕಾರ್ಮಿಕರು ಇರುವ ಬಗ್ಗೆ ಗುರುತಿಸಿ ಕಾರ್ಮಿಕ ಇಲಾಖೆ ಕೈಗೊಂಡಿರುವ ಕ್ರಮಗಳು, ಇದಕ್ಕೆ ಪೊಲೀಸ್ ಇಲಾಖೆ ನೀಡಿದ ನೆರವು ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳಿಂದ ಪದ್ಧತಿ ವಿರೋಧಿಸಲಿರುವ ಕಾನೂನಿನ ಕುರಿತು ಮಾಹಿತಿ ನೀಡಲು ನಿರ್ಧರಿಸಲಾಯಿತು. ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಶ್ರೀ ಅಪ್ಪಯ್ಯ ಶಿಂಧಿಹಟ್ಟಿ, ಗೋಪಾಲಗೌಡ, ಮಹಾನಗರಪಾಲಿಕೆಯ ಜಂಟಿ ಆಯುಕ್ತರಾದ ಮಧುಕರ ಗಡ್ಕರ್, ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳಾದ ಆರ್ ವಿ ಪಾಟೀಲ್, ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಾಮೇಗೌಡ ಸೇರಿದಂತೆ ಇತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.