ಮಂಗಳೂರು,ಜೂ.10: ಸರ್ಕಾರದ ಕಾಮಗಾರಿಗಳಲ್ಲಿ ಗುಣಮಟ್ಟ ಖಾತರೀಕರಣ ಹಾಗೂ ಪರಿಸರ ಸ್ನೇಹಿ ಯೋಜನೆಗಳಿಗೆ ಆದ್ಯತೆ ನೀಡಲು ತಂತ್ರಜ್ಞರ ಹಾಗೂ ಸಂಶೋಧಕರ ಮಾರ್ಗದರ್ಶನದೊಂದಿಗೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಕಾರ್ಯಾಗಾರ ಅಗತ್ಯ ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರು ಹೇಳಿದರು.
ನಗರದ ಟಿ ವಿ ರಮಣಪೈ ಕನ್ವೆಂಷನ್ ಸೆಂಟರ್ ನಲ್ಲಿ ಕಾಮಗಾರಿ ಗುಣ ಭರವಸೆ ಕಾರ್ಯಪಡೆ ಕರ್ನಾಟಕ ಸರ್ಕಾರದ ವತಿಯಿಂದ ಆಯೋಜಿಸಲಾದ ಸರ್ಕಾರದ ಕಾಮಗಾರಿಗಳಲ್ಲಿ ಗುಣಮಟ್ಟ ಖಾತರೀಕರಣ ಹಾಗೂ ಉನ್ನತೀಕರಣದ ಸಾಮಗ್ರಿಗಳ ಬಗ್ಗೆ ವಸ್ತುಪ್ರದರ್ಶನ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ರತಿಯೊಬ್ಬ ಅಧಿಕಾರಿಗೂ ಸಾಮಾಜಿಕ ಬದ್ಧತೆಯಿದ್ದು ಕಾಮಗಾರಿಗಳಲ್ಲಿ ನಿರಂತರ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಅವರು ಸಲಹೆ ಮಾಡಿದರು. ಮರ,ಉಸುಕಿಗೆ ಪರ್ಯಾಯವಾಗಿ ಹೊಸ ಸಂಶೋಧನೆಯನ್ನು ಕಂಡುಹುಡುಕಿದ್ದು ಪರಿಸರ ಸಂರಕ್ಷಣೆಯ ಬಗ್ಗೆಯೂ ಇಲಾಖೆ ಗಮನ ಹರಿಸಿದೆ ಎಂದು ಸಚಿವರು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿ ಗಳಾಗಿದ್ದ ಶಾಸಕ ಎನ್ ಯೋಗೀಶ್ ಭಟ್ ಅವರು, ವ್ಯವಸ್ಥೆಯಲ್ಲಿರುವ ಲೋಪಗಳ ಬಗ್ಗೆ ಅಧ್ಯಯನ ಮಾಡಿ ಇಂತಹ ಕಾರ್ಯಾ ಗಾರಗಳನ್ನು ಏರ್ಪಡಿಸುವ ಮುಖಾಂತರ ಇಚ್ಛಾ ಶಕ್ತಿಯಿಂದ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕಿದೆ ಎಂದರು. ಸಂಸದ ನಳಿನ್ ಕುಮಾರ್ ಅವರು, ಕಾರ್ಯಾನುಷ್ಠಾನದ ಅಗತ್ಯವನ್ನು ಪ್ರತಿಪಾದಿಸಿದರು. ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಎನ್. ಲಕ್ಷ್ಮಣ್ ರಾವ್ ಪೇಶ್ವೆ, ಮುಖ್ಯ ಇಂಜಿನಿಯರ್ ಸಿ.ಮೃತ್ಯುಂಜಯ ಸ್ವಾಮಿ ಅಧೀಕ್ಷಕ ಇಂಜಿನಿಯರ್ ಬಿ.ಎಸ್. ಬಾಲಕೃಷ್ಣ,ಇಂಜಿನಿಯರ್ ಗಳಾದ ಬೆಲದ್, ಬಿ.ಆರ್ ಎಸ್ ಕಿರಣ್ ಶಂಕರ್, ಬಾವೀಕಟ್ಟಿ ಅವರು ಉಪಸ್ಥಿತರಿದ್ದರು. ಕಾಮಗಾರಿ ಗುಣ ಭರವಸೆ ಕಾರ್ಯಪಡೆ ಸದಸ್ಯ ಮಹಾದೇವಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರವೀಂದ್ರನಾಥ್ ಸ್ವಾಗತಿಸಿದರು.