Wednesday, June 30, 2010

ಜಿಲ್ಲಾ ಜಾಗೃತಿ- ಉಸ್ತುವಾರಿ ಸಮಿತಿ ಸಭೆ ; ರಸ್ತೆ, ಮೂಲಭೂತ ಅಭಿವೃದ್ಧಿ ಬಗ್ಗೆ ಚರ್ಚೆ

ಮಂಗಳೂರು, ಜೂನ್.30 ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ ಹೊಸ 1351 ರಸ್ತೆಗಳ ಪ್ರಸ್ತಾಪ, ಎನ್ಆರ್ಇಜಿಎ ಯೋಜನೆಯಡಿ ಬಿಪಿಎಲ್, ಪರಿಶಿಷ್ಟ ಜಾತಿ ವರ್ಗದವರಿಗೆ ಆದ್ಯತೆ, ಎಂಆರ್ಪಿಎಲ್ಗಾಗಿ ಸಾರ್ವಜನಿಕ ರಸ್ತೆ ಹಣ ವ್ಯಯದ ಬಗ್ಗೆ, ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತಂತೆ ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಚಚಿಸಲ್ಪಟ್ಟಿತು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ವೈ) ಯ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್, ಪಿಎಂಜಿಎಸ್ವೈ ನಡಿ ಎಂಟನೆ ಹಂತದ ವರೆಗಿನ ಕಾಮಗಾರಿಗಳ ವಿವರ ನೀಡಿದರು. ಈ ಯೋಜನೆ ಯಡಿ ಎಂಟನೆ ಹಂತ (ಫೇಸ್ 8) ದವರೆಗೆ ಜಿಲ್ಲೆಗೆ ಮಂಜೂರಾಗಿದ್ದ 810.03 ಕಿ.ಮೀ. ಉದ್ದದ ಒಟ್ಟು 138 ರಸ್ತೆಗಳಡಿ 739.63 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗಳು ಪೂರ್ಣವಾಗಿದ್ದು, 118 ರಸ್ತೆ ಕಾಮಗಾರಿಗಳು ಸಂಪೂರ್ಣ ವಾಗಿದೆ ಎಂದು ತಿಳಿಸಿದರು.
ಈಗಾಗಲೆ ಗುಡ್ಡಕಾಡು ಪ್ರದೇಶಗಳಲ್ಲಿ ಗ್ರಾಮಗಳ ನಡುವೆ ಸಂಪರ್ಕವೇರ್ಪಡದ ರಸ್ತೆಗಳ ನಿಮಾಣಕ್ಕಾಗಿ ಸವೆ ನಡೆಸಿ ಕೇಂದ್ರ ಸರಕಾರಕ್ಕೆ ಈಗಾಗಲೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಂಚಾಯತ್ ಮಟ್ಟದಲ್ಲಿ ಜಿಲ್ಲೆಯಾದ್ಯಂತ ಒಟ್ಟು 1351 ಹೊಸ ರಸ್ತೆಗಳ ನಿಮಾಣದ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ರಸ್ತೆಗಳ ಒಟ್ಟು ಉದ್ದ 3493 ಕಿ.ಮೀ. ಆಗಿರುತ್ತದೆ ಎಂದು ಇಂಜಿನಿಯರ್ ತಾಲೂಕುವಾರು ವಿವರ ನೀಡಿದರು. (ತಾಲೂಕುವಾರು ವಿವರ: ಮಂಗಳೂರು- 580 ರಸ್ತೆಗಳು- 1052 ಕಿ.ಮೀ., ಬೆಳ್ತಂಗಡಿ- 299 ರಸ್ತೆಗಳು- 999.95 ಕಿ.ಮೀ., ಬಂಟ್ವಾಳ- 325 ರಸ್ತೆಗಳು- 692.17 ಕಿ.ಮೀ., ಪುತ್ತೂರು- 107 ರಸ್ತೆಗಳು- 449 ಕಿ.ಮೀ., ಸುಳ್ಯ- 112 ರಸ್ತೆಗಳು- 449.9 ಕಿ.ಮೀ.)
ಅಧಿಕಾರಿಗಳು ಸಭೆಗೆ ಸೂಕ್ತ ಮಾಹಿತಿಯನ್ನು ನೀಡಬೇಕು. ಸರಕಾರಕ್ಕೆ ಸೂಕ್ತ ವರದಿ ನೀಡುವುದರಿಂದ ಹಣ ಬಿಡುಗಡೆ ಆಗಲು ಸಾಧ್ಯ ಎಂದರು. ಮುಂದಿನ ಸಭೆಯಲ್ಲಿ ಈ ರೀತಿಯ ತಪ್ಪುಗಳು ಆಗದಂತೆ ಜಾಗೃತೆ ವಹಿಸುವಂತೆ ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಯೋಜನೆಯಡಿ ಗ್ರಾಮ ಮಟ್ಟದಲ್ಲಿ 10 ಲಕ್ಷದವರೆಗಿನ ಅನುದಾನವನ್ನು ಒಂದು ಲಕ್ಷಕ್ಕೆ ಇಳಿಕೆ ಮಾಡಲಾಗಿದೆ. ಸರಕಾರವು ಕೆಲವೊಂದು ಬದಲಾವಣೆಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಕೆಲಸ ಬೇಕಾದ ಫಲಾನುಭವಿಗಳು ತಮ್ಮ ಉದ್ಯೋಗ ಕಾರ್ಡನ್ನು ಕಂಪ್ಯೂಟರ್ ಮೂಲಕ ದೃಢೀಕರಿಸಿಕೊಳ್ಳಬೇಕಾಗಿದೆ ಎಂದರು.
ಪ್ರಸ್ತುತ ಈ ಯೋಜನೆಯಡಿ ಕಳೆದ ಮಾರ್ಚ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 2200.334 ಲಕ್ಷ ರೂ ವೆಚ್ಚದಲ್ಲಿ 19130 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 472 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದರು. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 82567 ಉದ್ಯೋಗ ಕಾಡಗಳನ್ನು ವಿತರಿಸಲಾಗಿದೆ ಎಂದವರು ತಿಳಿಸಿದರು.
ಸಾರ್ವಜನಿಕ ಉಪಯೋಗದ ಸುಮಾರು ಒಂದು ಕೋಟಿ ರೂ ವೆಚ್ಚದ ರಸ್ತೆಯೊಂದನ್ನು ಎಂ.ಆರ್.ಪಿ.ಎಲ್ ಸಂಸ್ಥೆಯು ತನ್ನ ವಶಕ್ಕೆ ಪಡೆದಿದ್ದ ಬಗ್ಗೆ ಏಳು ತಿಂಗಳ ಹಿಂದೆ ಸಭೆಯಲ್ಲಿ ಪ್ರಸ್ತಾಪಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದು, ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಯಾವುದೇ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕ ರಸ್ತೆಯೊಂದನ್ನು ಕಂಪನಿ ತನ್ನ ವಶಕ್ಕೆ ಪಡೆದಿದೆ. ಈ ಬಗ್ಗೆ ಆ ಕಂಪನಿಯು ಬೇರೆ ರಸ್ತೆಯೊಂದನ್ನು ನಿಮಿಸಬೇಕು ಅಥವಾ ಹಣವನ್ನು ಪಾವತಿಸಬೇಕೆಂದು ತಿಳಿಸಲಾಗಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದಾಗ, ಪರಿಶೀಲನೆ ಮಾಡಿ ಹಣ ಪಾವತಿಸಲು ಹೇಳುವುದಾಗಿ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿ ಪ್ರತಿಕ್ರಿಯಿಸಿದರಾದರೂ ಸಮಾಧಾನಗೊಳ್ಳದ ಸಂಸದರು, ಇಂದು ಎಂ.ಆರ್.ಪಿ.ಎಲ್ ನವರು , ನಾಳೆ ಎಸ್ಇಝೆಡ್ನವರು ಅಭಿವೃದ್ಧಿ ಹೆಸರಿನಲ್ಲಿ ಸರಕಾರದ ಹಣವನ್ನು ನುಂಗಬಾರದು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮತ್ತೆ ಮುಂದುವರಿದು ಮಾತನಾಡಿದ ಸಂಸದರು, ಮುಂದಿನ 15 ದಿನಗಳೊಳಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ, ಇಲ್ಲವಾದರೆ ನಾನೇ ವ್ಯವಸ್ಥೆ ಮಾಡುತ್ತೇನೆಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಉಪಾಧ್ಯಕ್ಷ ಜಗನ್ನಾಥ ಸಾಲಿಯಾನ್ ಉಪಸ್ಥಿತರಿದ್ದರು.