ಮಂಗಳೂರು, ಜೂನ್ 25: ರೋಗ ಬಂದ ನಂತರ ಶುಶ್ರೂಷೆ ಪಡೆಯುವುದಕ್ಕಿಂತ ರೋಗ ಬಾರದಂತೆ ತಡೆಯುವುದು ಬುದ್ಧಿವಂತಿಕೆ; ಮಳೆಗಾಲದಲ್ಲಿ ಹಲವು ಸಾಂಕ್ರಾಮಿಕ ರೋಗಗಳು ಆರಂಭವಾಗಲಿದ್ದು ಪ್ರತಿಯೊಬ್ಬರು ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕರಾದ ಎಂ. ನಾಗೇಂದ್ರ ಸ್ವಾಮಿ ಹೇಳಿದರು.
ಇಂದು ಸುರತ್ಕಲ್ ನ ವಿದ್ಯಾದಾಯಿನಿ ಪ್ರೌಢ ಶಾಲೆಯಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶ ನಾಲಯ, ವಾರ್ತಾ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್, ವಿದ್ಯಾದಾಯಿನಿ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಮಲೇರಿಯಾ ನಿಯಂತ್ರಣ ಮಾಸಾಚರಣೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾ ಡುತ್ತಿದ್ದರು.ಮಕ್ಕಳು ಮಳೆಗಾಲದಲ್ಲಿ ಹರಡುವ ರೋಗಗಳ ಬಗ್ಗೆ ತಿಳಿದುಕೊಂಡು ಮನೆಗಳಲ್ಲಿ, ಅಕ್ಕಪಕ್ಕದ ಪರಿಸರದಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡುವುದರಿಂದ ಸಾಮಾಜಿಕ ಜಾಗೃತಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಅನಾಫಿಲಿಸ್ ಸೊಳ್ಳೆಯಿಂದ ಬರುವ ಮಲೇರಿಯಾವನ್ನು ಪತ್ತೆ ಹಚ್ಚಲು ಇಂದು ಆಧುನಿಕ ಸೌಲಭ್ಯಗಳಿದ್ದು, ರೋಗ ಆರಂಭದಲ್ಲೇ ಚಿಕಿತ್ಸೆ ಪಡೆದರೆ ರೋಗವನ್ನು ಗುಣಪಡಿಸಿಕೊಳ್ಳಬಹುದು ಎಂದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗನ್ನಾಥ್ ಅವರು ಮಕ್ಕಳೊಂದಿಗೆ ಸಂವಾದ ನಡೆಸಿ ಸೊಳ್ಳೆಯ ಕಡಿತದಿಂದ ರಕ್ಷಿಸಿಕೊಳ್ಳುವ ಬಗ್ಗೆ ಹಾಗೂ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸುವ ರೀತಿಯನ್ನು ವಿವರಿಸಿದರು. 2004ರಿಂದ ಜಿಲ್ಲೆಯಲ್ಲಿ ಮಲೇರಿಯಾ ರೋಗ ಕಡಿಮೆಯಾಗಿದ್ದು, ಜ್ವರ ಬಂದಲ್ಲಿ ತಕ್ಷಣ ರಕ್ತ ಪರೀಕ್ಷೆ ಮಾಡಿಸುವುದರಿಂದ ಚಿಕಿತ್ಸೆ ಪಡೆಯುವುದು ಸುಲಭ ಎಂದರು.ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಪ್ರೊ. ಗಿರಿಧರ್ ಹತ್ವಾರ್, ಸಂಚಾಲಕರಾದ ಶ್ರೀಮತಿ ಉಮಾದೇವಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಅರಣ್ ಕುಮಾರ್ ಅವರು ಮಲೇರಿಯಾ ಬಗ್ಗೆ ಉಪನ್ಯಾಸ ನೀಡಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೇಶವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹೇಮಲತಾ ಕಾರ್ಯಕ್ರಮ ಸಂಯೋಜಿಸಿದ್ದರು. ಕ್ಷೇತ್ರ ಪ್ರಚಾರಾಧಿಕಾರಿ ಟಿ.ಬಿ. ನಂಜುಂಡ ಸ್ವಾಮಿ ಸ್ವಾಗತಿಸಿದರು. ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಈ ಸಂಬಂಧ ಕ್ಷೇತ್ರ ಪ್ರಚಾರ ಇಲಾಖೆ ವತಿಯಿಂದ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ನಾಲ್ಕು ಬಹುಮಾನಗಳನ್ನು ನೀಡಲಾಯಿತು. ಆರೋಗ್ಯ ಇಲಾಖೆ ವತಿಯಿಂದ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.