Friday, April 30, 2010

ನಗರ ಪೊಲೀಸ್ ಆಯುಕ್ತರಾಗಿ ಸೀಮಂತ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

ಮಂಗಳೂರು, ಎಪ್ರಿಲ್ 30: ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ 1996ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಪೋಲಿಸ್ ಕೇಂದ್ರ ಕಚೇರಿಯಲ್ಲಿ ಪ್ರಭಾರ ಆಯುಕ್ತರಾಗಿದ್ದ ಪಶ್ಚಿಮ ವಲಯ ಪೋಲಿಸ್ ಮಹಾ ನಿರೀಕ್ಷಕರಾದ ಗೋಪಾಲ್ ಬಿ. ಹೊಸೂರು ಅವರಿಂದ ಸೀಮಂತ್ ಕುಮಾರ್ ಸಿಂಗ್ ಅವರು ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಿಂಗ್ ಅವರು ಕಮೀಶನರೇಟ್ ವ್ಯವಸ್ಥೆಯಡಿ ಜನರ ಬೇಡಿಕೆಗಳಿಗೆ ಸ್ಪಂದಿಸಿ ಹೊಸ ಆವಿಷ್ಕಾರಗಳನ್ನು ಜಾರಿಗೆ ತರುವುದಾಗಿ ನುಡಿದರು. ಕಮಿಷನರೇಟ್ ವ್ಯವಸ್ಥೆ ಜನಪರವಾದ ಉದ್ದೇಶವನ್ನಿರಿಸಿ ಆರಂಭಿಸಲಾಗಿದ್ದು, ವ್ಯವಸ್ಥೆಯನ್ನು ಸದೃಢಗೊಳಿಸುವುದಾಗಿ ಹೇಳಿದರು. 2000-2004ರವರೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವದ ಹಿನ್ನಲೆ ಮುಂದಿನ ದಿನಗಳಲ್ಲಿ ವ್ಯವಸ್ಥೆಯನ್ನು ಉತ್ತಮ ಪಡಿಸುವಲ್ಲಿ ನೆರವಾಗಬಹುದು ಎಂದರು. ಮಂಗಳೂರು ಪೋಲಿಸ್ ಕಮೀಶನರೇಟ್ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬರಲು ಬೇಕಾದ ಎಲ್ಲಾ ಪ್ರಕ್ರಿಯೆಗಳು ಇಂದಿನಿಂದ ಚುರುಕುಗೊಳ್ಳಲಿದೆ.ಇದೇ ಸಂದರ್ಭದಲ್ಲಿ ತನ್ನ ಕಮೀಶನರೇಟ್ ವ್ಯಾಪ್ತಿಯ ಹಿರಿಯ ಮತ್ತು ಕಿರಿಯ ಪೋಲಿಸ್ ಅಧಿಕಾರಿಗಳ ಸಭೆ ನಡೆಸಿ ವಿಚಾರ ವಿನಿಮಯ ಮಾಡಿಕೊಂಡರು.ಉಪಪೊಲೀಸ್ಆಯುಕ್ತ ಆರ್ ರಮೇಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.