ಮಂಗಳೂರು, ಎಪ್ರಿಲ್ 19: ಮೇ 12 ರಂದು ನಡೆಯಲಿರುವ ಗ್ರಾಮ ಪಂಚಾಯ್ತಿ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿದ್ದು, ಜಿಲ್ಲೆಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪೊನ್ನುರಾಜ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಟಿಯಲ್ಲಿ ಈ ಬಾರಿ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳನ್ನು ಜಿಲ್ಲಾಧಿಕಾರಿಗಳು ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳ 203 ಗ್ರಾಮ ಪಂಚಾಯತಿಗಳ ಪೈಕಿ ಮೂರು ಗ್ರಾಮ ಪಂಚಾಯತಿಗಳ ಅಧಿಕಾರ ಅವಧಿ ಕೊನೆಗೊಳ್ಳದ ಕಾರಣ ಅವುಗಳನ್ನು ಹೊರತುಪಡಿಸಿ,200 ಗ್ರಾಮ ಪಂಚಾಯತಿಗಳ 3208 ಸದಸ್ಯ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.ಇವುಗಳಲ್ಲಿ 1434 ಸ್ಥಾನಗಳು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಒಟ್ಟು 8,96,719 ಮತದಾರರಿದ್ದು,ಒಟ್ಟು 1115 ಮತಗಟ್ಟೆಗಳಿವೆ.ಇವುಗಳಲ್ಲಿ 336 ಮತಗಟ್ಟೆಗಳು ಸೂಕ್ಷ್ಮ ಮತ್ತು 181 ಮತಗಟ್ಟೆಗಳು ಅತೀ ಸೂಕ್ಷ್ಮ ಎಂದು ಗುರುತ್ತಿಸಲಾಗಿದ್ದು, ನಕ್ಸಲ್ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಎ ಎನ್ ಎಫ್ ಮತ್ತು ಹೆಚ್ಚುವರಿ ಪೋಲಿಸರನ್ನು ಬಂದೋಬಸ್ತಿಗಾಗಿ ನಿಯೋಜಿಸಲಾಗುವುದು ಎಂದು ಅವರು ತಿಳಿಸಿದರು.
ನಾಮ ಪತ್ರ ಸ್ವೀಕಾರ ಕೇಂದ್ರಗಳು:ಆಯಾಯ ಗ್ರಾಮ ಪಂಚಾಯತಿ ಕಚೇರಿಗಳನ್ನು ನಾಮಪತ್ರ ಸ್ವೀಕಾರ ಕೇಂದ್ರ ಗಳನ್ನಾಗಿ ಗುರುತಿ ಸಲಾಗಿದೆ.ಈ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಇಚ್ಚಿಸುವ, ಗ್ರಾಮ ಪಂಚಾಯತ್ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿರುವ, 21 ವರ್ಷ ಪ್ರಾಯ ಪೂರ್ಣಗೊಂಡವರು ಆಯಾಯ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಚುನಾವಣೆ ನಡೆಸುವ ಬಗ್ಗೆ ನೇಮಕ ಮಾಡಿರುವ ಚುನಾವಣಾಧಿಕಾರಿ ಆಥವಾ ಸಹಾಯಕ ಚುನಾವಣಾಧಿಕಾರಿಯವರಿಗೆ ಎಪ್ರಿಲ್ 21 ರಿಂದ ಎಪ್ರಿಲ್ 28 ರ ಅವಧಿಯಲ್ಲಿ ನಾಮ ಪತ್ರ ಸಲ್ಲಿಸಬಹುದಾಗಿದೆ. ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗೆ ರೂ.200, ಹಿಂದುಳಿದ ವರ್ಗ,ಅನುಸೂಚಿತ ಜಾತಿ ಮತ್ತು ಪಂಗಡ ಮತ್ತು ಮಹಿಳಾ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗೆ ರೂ 100 ಠೇವಣಿಯನ್ನು ನಿಗದಿಪಡಿಸಲಾಗಿದೆ. ಎಪ್ರಿಲ್ 21 ರಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು,28-04-2010 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ. ಎಪ್ರಿಲ್ 29 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದ್ದು,ಮೇ 03 ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದೆ ಎಂದು ಅವರು ಹೇಳಿದರು. ಮೇ 12 ರಂದು ಮತದಾನ ನಡೆಯಲಿದ್ದು, ಮೇ 17 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಎಡಿಷನಲ್ ಎಸ್ಪಿ ಆರ್. ರಮೇಶ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.